ಕನ್ನಡಪ್ರಭ ವಾರ್ತೆ ಪಾಂಡವಪುರ
ಜಿಲ್ಲಾ ಕಾಂಗ್ರೆಸ್ ನಾಯಕರು ಮೇಲುಕೋಟೆ ಕ್ಷೇತ್ರದ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ನೀಡದೇ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.ಪಟ್ಟಣದಲ್ಲಿ ಕೆಪಿಸಿಸಿ ಸದಸ್ಯ, ಹಿರಿಯ ಮುಖಂಡ ಎಲ್.ಡಿ.ರವಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ(ಕಿಟ್ಟಿ) ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ರೈತಸಂಘಕ್ಕೆ ಬೆಂಬಲ ನೀಡಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸೂಕ್ತ ಸ್ಥಾನಮಾನ ನೀಡಿಲ್ಲ. ಇದಕ್ಕೆ ಜಿಲ್ಲಾಧ್ಯಕ್ಷ ಹಾಗೂ ಬ್ಲಾಕ್ ಅಧ್ಯಕ್ಷರೇ ಕಾರಣ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್ ಆರೋಪಿಸಿದರು.ಪಕ್ಷದ ಕಾರ್ಯಕರ್ತರು ಅನುಭವಿಸುತ್ತಿರುವ ಸಮಸ್ಯೆಯನ್ನು ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದಾರೋ? ಇಲ್ಲವೋ? ನಮಗೆ ಗೊತ್ತಿಲ್ಲ ಎಂದು ಜಿಲ್ಲಾಧ್ಯಕ್ಷರ ವಿರುದ್ಧ ಹರಿಹಾಯ್ದರು.
ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಇಚ್ಛಾಶಕ್ತಿಯನ್ನು ಜಿಲ್ಲಾ ನಾಯಕರು, ರಾಜ್ಯ ನಾಯಕರಿಗಿಲ್ಲ. ನೀವು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.ಈಗ ಲೋಕಸಭಾ ಚುನಾವಣೆ, ಮುಂದೆ ಜಿಪಂ, ತಾಪಂ ಚುನಾವಣೆಗಳು ಬರುತ್ತಿವೆ. ಅಷ್ಟರೊಳಗೆ ರಾಜ್ಯ ನಾಯಕರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಚರ್ಚಿಸಿ ಸಮಸ್ಯೆ ಆಲಿಸಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಬೇಕೋ? ಬೇಡವೋ? ಎನ್ನುವುದನ್ನು ಚಿಂತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆಗಳು ಹಾಗೂ ಸೂಕ್ತ ಸ್ಥಾನಮಾನಕ್ಕೆ ರಾಜ್ಯ ನಾಯಕರ ಗಮನಕ್ಕೆ ತರುವ ಸಂಬಂಧ ಎಲ್.ಡಿ.ರವಿ ಹಾಗೂ ಡಾ.ಎಂ.ಮಾಯಿಗೌಡ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಚರ್ಚಿಸಲು ನಿರ್ಣಯಕೈಗೊಂಡರು.ಹಿರಿಯ ಮುಖಂಡ ಎಲ್.ಡಿ.ರವಿ ಮಾತನಾಡಿ, ನನ್ನ ಆರೋಗ್ಯದ ಸಮಸ್ಯೆಯಿಂದ ಕಳೆದ ಚುನಾವಣೆಯಿಂದಲೂ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಲ್ಲ. ನಮ್ಮ ಕಾರ್ಯಕರ್ತರನ್ನು ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.
ಈ ವಿಚಾರವನ್ನು ರಾಜ್ಯ ಕೆಪಿಸಿಸಿ ಅಧ್ಯಕ್ಷರ ಜತೆ ಚರ್ಚಿಸಲು ಸಮಯ ನಿಗಧಿಪಡಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಆರ್.ಎ.ನಾಗಣ್ಣ, ಡಾ.ಎಂ.ಮಾಯಿಗೌಡ, ಸೋಮೇಗೌಡ, ಡಿ.ಕೆ.ದೇವೇಗೌಡ, ಎಲ್.ಸಿ.ಮಂಜುನಾಥ್, ಬೊಮ್ಮೇಗೌಡ, ಚಿಕ್ಕಾಡೆ ಮಹೇಶ್, ದೇವರಾಜು, ಬಂಕ್ ಶ್ರೀನಿವಾಸ್, ಎನ್.ರಾಮೇಗೌಡ, ಮಾಲತಿ ಮರಿಸ್ವಾಮೇಗೌಡ, ತಮ್ಮಣಗೌಡ, ದೀಲಿಪ್, ಸಿದ್ದಲಿಂಗಯ್ಯ, ಪುರಸಭ ಸದಸ್ಯ ಉಮಾಶಂಕರ್, ಹರವು ಸುರೇಶ್, ಕಟ್ಟೇರಿ ದೇವರಾಜು ಸೇರಿದಂತೆ ಹಲವರು ಇದ್ದರು.