ಕ್ರಸ್ಟ್‌ ಗೇಟ್‌ ದುರಸ್ತಿಗೆ ನಿರ್ಲಕ್ಷ್ಯ, ರೈತರೊಂದಿಗೆ ಸರ್ಕಾರ ಚೆಲ್ಲಾಟ- ಬಿಜೆಪಿ ಟೀಕೆ

KannadaprabhaNewsNetwork |  
Published : May 27, 2025, 12:29 AM IST
26ಕೆಪಿಎಲ್21 ತುಂಗಭದ್ರಾ ಜಲಾಶಯ ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿರುವುದು. | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತುಂಗಭದ್ರಾ ಬೋರ್ಡ್ ಅನುಮತಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಬೋರ್ಡ್ ಅನುಮತಿ ನೀಡಿದೆ.

ಕೊಪ್ಪಳ:

ತುಂಗಭದ್ರಾ ಕ್ರಸ್ಟ್ ಗೇಟ್ ಮುರಿದು ವರ್ಷವಾದರೂ ಶಾಶ್ವತ ದುರಸ್ತಿ ಕಾರ್ಯ ನಿರೀಕ್ಷೆಯಂತಾಗುತ್ತಿಲ್ಲ. ಈ ಮೂಲಕ ರಾಜ್ಯ ಸರ್ಕಾರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲ್ಕು ಜಿಲ್ಲೆಯ ರೈತರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಶಾಸಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುನಿರಾಬಾದ್ ತುಂಗಭದ್ರಾ ಜಲಾಶಯ ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ ಮಾಡಿ, ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ ಮುರಿದಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ತಾತ್ಕಾಲಿಕ ದುರಸ್ತಿ ಮಾಡಲಾಗಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಮಾಡುವ ಕಾರ್ಯ ಆಗಬೇಕಾಗಿದೆ. ಈಗಷ್ಟೇ ಕೇವಲ ಮುರಿದು ಹೋಗಿರುವ 19ನೇ ಕ್ರಸ್ಟ್ ಗೇಟ್ ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಆದರೆ, ರೈತರ ಆತಂಕ ಎಂದರೆ ಈ ವರ್ಷ ತುಂಗಭದ್ರಾ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರು ಮಾತ್ರ ಸಂಗ್ರಹ ಮಾಡುತ್ತಾರೆ ಎನ್ನುವುದು. ಹೀಗಾಗಿ, ರಾಜ್ಯ ಸರ್ಕಾರ ಈ ವಿಷಯದಲ್ಲಿ ರೈತರೊಂದಿಗೆ ಚೆಲ್ಲಾಟವಾಡದೆ ಈ ಕುರಿತು ಸ್ಪಷ್ಟ ಮಾಹಿತಿ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತುಂಗಭದ್ರಾ ಬೋರ್ಡ್ ಅನುಮತಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಬೋರ್ಡ್ ಅನುಮತಿ ನೀಡಿದೆ ಎಂದ ಅವರು, ಈಗಾಗಲೇ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಬಂದಿರುವ ನೀರನ್ನು ಹಿಡಿದಿಟ್ಟುಕೊಂಡು ದುರಸ್ತಿ ಮಾಡಲು ಆಗುವುದಿಲ್ಲ. ಅಲ್ಲದೆ 19ನೇ ಕ್ರಸ್ಟ್ ಗೇಟ್ ದುರಸ್ತಿಗೆ ಟೆಂಡರ್ ಪ್ರಕ್ರಿಯೇ ನಡೆದೇ ತಿಂಗಳು ಗತಿಸಿದ್ದು, ಇನ್ನೂ ಯಾವುದೇ ಪ್ರಗತಿಯಾಗಿಲ್ಲ ಎಂದು ಕಿಡಿಕಾರಿದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ವರ್ಷ ಕಳೆಯುತ್ತಿದ್ದರೂ ಕ್ರಸ್ಟ್‌ ಗೇಟ್‌ ದುರಸ್ತಿ ಮಾಡದೆ ಇರುವುದರಿಂದ ರೈತರ ಬದುಕಿಗೆ ಪೆಟ್ಟು ಬೀಳುತ್ತದೆ ಎಂದರು.

ರಾಜ್ಯ ಸರ್ಕಾರಕ್ಕ ಕಾಳಜಿ ಇಲ್ಲ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗವಂತೂ ಈ ಸರ್ಕಾರದಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಜಲಾಶಯವೊಂದರ ಕ್ರಸ್ಟ್ ಗೇಟ್ ಮುರಿದಾಗ ಅದನ್ನು ಶಾಶ್ವತವಾಗಿ ದುರಸ್ತಿ ಮಾಡುವ ಕಾರ್ಯ ಬೇಗನೆ ಆಗಬೇಕು. ಆದರೆ, ಮತ್ತೆ ಮಳೆಗಾಲ ಪ್ರಾರಂಭವಾಗಿ ನೀರು ಬರಲು ಪ್ರಾರಂಭಿಸಿದರೂ ಸಹ ಸರ್ಕಾರ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಈ ಬಾರಿ ರೈತರಿಗೆ ಅನ್ಯಾಯ ಆದರೆ ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಕ್ರಸ್ಟ್ ಗೇಟ್‌ ಮುರಿದು ಸಮಸ್ಯೆಯಾಗುವ ಮೂಲಕ ಎಚ್ಚರಿಕೆ ನೀಡಿದೆ. ಈಗಲೇ ಎಚ್ಚೆತ್ತು ಅದನ್ನು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಮುಖಂಡರಾದ ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಬಸವರಾಜ ಕ್ಯಾವಟರ್, ರಮೇಶ ವೈದ್ಯ ಸೇರಿದಂತೆ ಅನೇಕರು ಇದ್ದರು.

ಅನರ್ಹತೆ ಹಿಂಪಡೆದಿದ್ದು ಸ್ವಾಗತಾರ್ಹ

ಬಿಜೆಪಿಯ 18 ಶಾಸಕರ ಅನರ್ಹತೆಯನ್ನು ಹಿಂಪಡೆದಿದ್ದು ಸ್ವಾಗತಾರ್ಹ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಮುನಿರಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಹಿಂಪಡೆಯದೆ ಇದ್ದರೆ ನಾವು ಕೋರ್ಟ್ಗೆ ಹೋಗುತ್ತಿದ್ದೆವು. ಹೀಗಾಗಿ, ಅವರು ಹಿಂಪಡೆದಿದ್ದಾರೆ. ಸ್ಪೀಕರ್ ಹಜ್‌ಯಾತ್ರೆಗೆ ಹೊರಟಿರುವುದರಿಂದ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇವೆ. ಸ್ಪೀಕರ್ ಅವರು ಒತ್ತಡಕ್ಕೆ ಮಣಿದು ಬಿಜೆಪಿ ಶಾಸಕರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗ ಮಾಡಿದ್ದರು. ಈಗ ತಮ್ಮ ತಪ್ಪಿನ ಅರಿವು ಆಗಿರುವುದರಿಂದ ವಾಪಸ್‌ ಪಡೆದಿದ್ದಾರೆ. ಇಲ್ಲದಿದ್ದರೆ ಕಾನೂನು ಹೋರಾಟ ಇದ್ದೇ ಇತ್ತು ಎಂದಿದ್ದಾರೆ.ಸಚಿವ ಶಿವರಾಜ ತಂಗಡಗಿ ಅವರಿಗೆ ಮಾನಮರ್ಯಾದೆ ಇಲ್ಲ. ಏನು ಮಾತನಾಡಬೇಕು ಎನ್ನುವುದು ಗೊತ್ತಿಲ್ಲ. ಶೋಕಿಗಾಗಿ ನಾನು ಗನ್‌ ಮ್ಯಾನ್‌ ಕೇಳುತ್ತಿದ್ದೇನೆ ಎನ್ನುತ್ತಿದ್ದಾನೆ. ಆದರೆ, ಗುಪ್ತಚರ ಇಲಾಖೆಯ ವರದಿ ನನಗೆ ಗನ್‌ ಮ್ಯಾನ್‌ ಕೊಡಬೇಕೆಂದು ಹೇಳಿದೆ. ಕಾನೂನು ಮೂಲಕ ನಾನು ಗನ್ ಮ್ಯಾನ್‌ ಪಡೆಯುತ್ತೇನೆ.

ಬಸವರಾಜ ದಢೇಸೂಗುರು, ಬಿಜೆಪಿ ಜಿಲ್ಲಾಧ್ಯಕ್ಷ

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್