- ನೀರು ತಲುಪದಿರಲು ತಾಂತ್ರಿಕ ಕಾರಣಗಳೇನು? । ಪ್ರತಿಭಟನೆಯಲ್ಲಿ ರೈತರ ಪ್ರಶ್ನೆ, ಆಕ್ರೋಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಸಾಸಿವೆಹಳ್ಳಿ ಏತನೀರಾವರಿ ಯೋಜನೆಗೆ ಒಳಪಡುವ ತಾಲೂಕಿನ ಜೋಳದಾಳ್, ಅಜ್ಜಿಹಳ್ಳಿ, ಹರೋನಹಳ್ಳಿ ಮತ್ತು ಮುದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 20 ಕೆರೆ-ಕಟ್ಟೆಗಳಿಗೆ ಇದುವರೆಗೂ ಏತನೀರಾವರಿ ನೀರು ಹರಿದುಬಂದಿಲ್ಲ ಎಂದು ಆರೋಪಿಸಿ, ತಾಲೂಕು ರೈತ ಸಂಘದಿಂದ ಸೋಮವಾರ ತಾಲೂಕಿನ ಕೆ.ಗಾಣದಕಟ್ಟೆ ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು.ಈ ಸಂದರ್ಭ ತಾಲೂಕು ಹಸಿರು ಸೇನೆ ಅಧ್ಯಕ್ಷ ಬಸವಾಪುರ ರಂಗನಾಥ್ ಮಾತನಾಡಿ, ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಪ್ರಾರಂಭಗೊಂಡು ಎರಡು ವರ್ಷಗಳೇ ಕಳೆದಿವೆ. ಆದರೂ, ತಾಲೂಕಿನ 20 ಕೆರೆಗಳಿಗೆ ಇದುವರೆಗೂ ನೀರು ಹರಿದುಬಂದಿಲ್ಲ. ಕೆರೆಗಳಿಗೆ ನೀರು ಹರಿದುಬಾರದೆ ಇರುವುದಕ್ಕೆ ಇರುವ ತಾಂತ್ರಿಕ ಸಮಸ್ಯೆಗಳೇನು, ಯಾರು ಕಾರಣ ಎಂದು ಅಧಿಕಾರಿಗಳು ತಿಳಿಸಬೇಕಾಗಿದೆ ಎಂದರು.
ಪ್ರತಿಭಟನೆ ಸ್ಥಳಕ್ಕೆ ನೀರಾವರಿ ಇಲಾಖೆ ಅಭಿಯಂತರ ಶಂಕರಪ್ಪ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಮಾತನಾಡಿ, ಸಾಸಿವೆಹಳ್ಳಿ ಏತನೀರಾರಿ ಯೋಜನೆ ಪ್ರಾರಂಭಗೊಂಡು ವರ್ಷ ಕಳೆದಿದೆ. ಕೆಲವು ಕಡೆಗಳಲ್ಲಿ ತಾಂತ್ರಿಕ ದೋಷದಿಂದ ನೀರು ಬರುತ್ತಿಲ್ಲ. ಈ ಯೋಜನೆಗೆ ವಿನ್ಯಾಸ ಅಭಿಯಂತರರಿಂದ ಪರಿಶೀಲನೆ ನಡೆಸಲು ತಿಳಿಸಿದ್ದೇವೆ. ಅವರು ಬಂದು ಪರಿಶೀಲನೆ ನಡೆಸುವವರೆಗೂ ರೈತರು ಸಹಕರಿಸಬೇಕು. ಈ ಬಗ್ಗೆ ನಮ್ಮ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು. ಆಗ ರೈತರು, ನಿಮ್ಮ ಇಲಾಖೆಯ ಎಕ್ಸಿಕ್ಯುಟಿವ್ ಅಭಿಯಂತರರು ಸ್ಥಳಕ್ಕೆ ಬರುವವರೆಗೂ ನಿಮ್ಮನ್ನು ಇಲ್ಲಿಂದ ತೆರಳಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿ, ಅಧಿಕಾರಿಗೆ ಘೇರಾವ್ ಹಾಕಿದರು.
ಪ್ರತಿಭಟನಾ ಸ್ಥಳಕ್ಕೆ ಗ್ರೇಡ್-2 ತಹಸೀಲ್ದಾರ್ ರುಕ್ಮಿಣಿಬಾಯಿ ಭೇಟಿ ನೀಡಿ ಮನವಿಯನ್ನು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಂದ್ರಪ್ಪ, ರೇವಣ್ಣ, ದೇವರಹಳ್ಳಿ ಶಂಕರ್, ರಂಗಪ್ಪ, ನಾಗಣ್ಣ, ಕಾಂತರಾಜ್, ಲೋಹಿತ್, ಹನುಮಂತಪ್ಪ, ಮಹೇಶ್ವರಪ್ಪ, ರವೀಶ್, ಪೂಜಾರ್ ರಂಗಪ್ಪ, ಶಿವಕುಮಾರ್ ಸೇರಿದಂತೆ ನೂರಾರು ಸಂಖ್ಯೆಯ ರೈತರು ಹಾಜರಿದ್ದರು.
-21ಕೆಸಿಎನ್ಜಿ1: ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯ ಕೆರೆಗಳಿಗೆ ಶೀಘ್ರ ನೀರು ಹರಿಸುವಂತೆ ಒತ್ತಾಯಿಸಿ ಕೆ.ಗಾಣದಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು.