ಕನ್ನಡಪ್ರಭ ವಾರ್ತೆ ಬ್ಯಾಡಗಿ
ಕೆರೆಗಳ ನಿರ್ಮಾಣ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರ ಆಲೋಚಿತ, ನಿರ್ಮಿತ ಹಾಗೂ ಶಾಶ್ವತ ಜಲಮೂಲಗಳಾಗಿವೆ. ಅವುಗಳಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ಆದರೆ ಕೆರೆಗಳ ಸಂರಕ್ಷಣೆ ವಿಷಯದಲ್ಲಿ ಸರ್ಕಾರ ಸೇರಿದಂತೆ ಸಾರ್ವಜನಿಕರ ನಿರ್ಲಕ್ಷ್ಯ ಮನೋಭಾವನೆ ದುರದೃಷ್ಟಕರ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ನೀರಿನ ಬವಣೆ ನೀಗಿಸಿಕೊಳ್ಳಲು ಮುಂದೊಂದು ದಿವಸ ನಾವು ವಾಸವಿದ್ದ ಗ್ರಾಮಗಳನ್ನೇ ಬಿಟ್ಟು ಬೇರೆಡೆಗೆ ತೆರಳಬೇಕಾದೀತು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ ಎಚ್ಚರಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಪಂ ಕದರಮಂಡಲಗಿ ಹಾಗೂ ದೊಡ್ಡಕಟ್ಟೆ ಕೆರೆ ಅಭಿವೃದ್ಧಿ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ‘ನಮ್ಮೂರು ನಮ್ಮಕೆರೆ’ ಕಾರ್ಯಕ್ರಮದಡಿ ಪುನಃಶ್ಚೇತನಗೊಳಿಸಲಾದ ದೊಡ್ಡಕಟ್ಟೆ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜರ ದೂರದೃಷ್ಟಿ ಚಿಂತನೆಗಳು ಇಂದಿನ ಯಾವುದೇ ತಾಂತ್ರಿಕ ವಿದ್ಯೆಗಿಂತ ಮಿಗಿಲಾಗಿದ್ದು, ಅವರ ವಿಚಾರಧಾರೆಗಳು ಶಾಶ್ವತ ಪರಿಹಾರಕ್ಕಾಗಿ ಮೀಸಲಿದ್ದವು ಎಂಬುದಕ್ಕೆ ನೈಸರ್ಗಿಕವಾಗಿ ನೀರು ಸಂಗ್ರಹಕ್ಕೆ ಮುಂದಾಗಿರುವುದೇ ನಮ್ಮ ಎದುರಿಗಿರುವ ಉದಾಹರಣೆಯಾಗಿದೆ ಎಂದರು.ಅತಿಕ್ರಮಣಕೆ ಸ್ವಯಂಪ್ರೇರಿತ ಕಡಿವಾಣ ಹಾಕಿಕೊಳ್ಳಿ:
ಅತಿಕ್ರಮಣ ನಿಲ್ಲಬೇಕು, ಕೆರೆಗಳ ಪುನಃಶ್ಚೇತನ ನಿರಂತರವಾಗಿ ನಡೆಯಬೇಕು. ರಾಜ್ಯದಲ್ಲಿ ಒಟ್ಟು 36,000 ಕೆರೆಗಳಿದ್ದು, ಯೋಜನೆ ವತಿಯಿಂದ 650 ಕೆರೆಗಳು ಹೂಳನ್ನು ಎತ್ತಿ ಪುನಃಶ್ಚೇತನಗೊಳಿಸಲಾಗಿದೆ. ಕೆರೆಗಳ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ₹51 ಕೋಟಿ ಅನುದಾನ ಬಳಕೆ ಮಾಡಲಾಗಿದ್ದು ಸಾರ್ವಜನಿಕರು ನಮ್ಮೆಲ್ಲರಿಗೂ ಜೀವಾಳವಾಗಿರುವ ಕೆರೆಗಳ ಅತಿಕ್ರಮಣಕ್ಕೆ ಸ್ವಯಂಪ್ರೇರಿತ ಕಡಿವಾಣ ಹಾಕಿಕೊಳ್ಳುವಂತೆ ಸಲಹೆ ನೀಡಿದರು.ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ಮಾತನಾಡಿ, ಕೆರೆಗಳ ನೀರು ಬಳಕೆ ಮತ್ತು ಅವಶ್ಯಕತೆ ಕುರಿತು ನಾವೆಲ್ಲಾ ಬಹಳಷ್ಟು ಮಾತನಾಡುತ್ತೇವೆ ಆದರೆ ಜಲಮೂಲಗಳನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ, ಈ ನಿಟ್ಟಿನಲ್ಲಿ ಬಹಳಷ್ಟು ಹೋರಾಟಗಳೇ ದೇಶದೆಲ್ಲೆಡೆ ನಡೆಯುತ್ತಿವೆ, ಹೀಗಿದ್ದರೂ ನಮ್ಮೂರಿನ ಕೆರೆಗಳನ್ನೇ ಮುಚ್ಚುವಂತಹ ಕೆಲಸಕ್ಕೂ ನಾವುಗಳು ಕೈಹಾಕುತ್ತಿದ್ದು ಇದೊಂದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ಜನಜಾಗೃತಿ ವೇದಿಕೆ ಸದಸ್ಯ ಮುರಿಗೆಪ್ಪ ಶೆಟ್ಟರ ಮಾತನಾಡಿ, ಕೆರೆಗಳು ರೈತಾಪಿ ಜನರಿಗೆ ಅಕ್ಷಯಪಾತ್ರೆಗಳಿದ್ದಂತೆ. ಅವುಗಳನ್ನು ಉಳಿಸುವುದು ಸೇರಿದಂತೆ ಯಥಾಸ್ಥಿತಿಯಲ್ಲಿ ಮುಂದಿನ ಪೀಳಿಗೆ ಬಳಕೆಗೆ ಅನುಕೂಲ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ದೊಡ್ಡಕಟ್ಟೆ ಕೆರೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಕುರಡಣ್ಣನವರ ಮಾತನಾಡಿ, ಸಮುದಾಯಕ್ಕೆ ಅವಶ್ಯವಿರುವ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸ್ಥಳೀಯರ ಸಹಭಾಗಿತ್ವ ಪ್ರಮುಖವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಯ್ಕರ, ಕಾಂತೇಶ ದೇವಸ್ಥಾನ ಪಂಚ ಕಮಿಟಿಯ, ಹನುಮಂತಪ್ಪ ಕುಡುಪಲಿ, ಸ್ವಸಹಾಯ ಸಂಘಗಳ ಸದಸ್ಯರ, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ಘಟಕದ ನಿರ್ದೇಶಕ ನಾಗರಾಜ್ ಶೆಟ್ಟಿ ಸ್ವಾಗತಿಸಿ, ಯೋಜನಾಧಿಕಾರಿ ರಘುಪತಿಗೌಡ ನಿರೂಪಿಸಿದರು. ಕೆರೆ ಅಭಿಯಂತರ ನಿಂಗರಾಜ್ ವಂದಿಸಿದರು.