ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಾಕಷ್ಟು ಹಣ ಪಡೆದು ದಲ್ಲಾಳಿತನ ನಡೆದಿದೆ
ಗಂಗಾವತಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಗಂಗಾವತಿ ಕ್ಷೇತ್ರದ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಾ ಬರಲಾಗಿದೆ. ತಾವೊಬ್ಬ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ವರಿಷ್ಠರಿಗೆ ಕಾರ್ಯಕರ್ತರ ನೇಮಕ ಬಗ್ಗೆ ಶಿಫಾರಸ್ಸು ಮಾಡಿದರೆ ಕಡೆಗಣಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ನಮ್ಮ ತಂದೆ 5 ಭಾರಿ ಸಂಸದ, ಶಾಸಕರಾಗಿ ಕಾಂಗ್ರೆಸ್ ಉಳಿವಿಗಾಗಿ ಹೋರಾಡಿದ ನಾಯಕ. ನಾನೂ ಸಹ ಎರಡು ಭಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕಾಡಾ ಅಧ್ಯಕ್ಷ, ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಸಂಘಟನೆಯಲ್ಲಿದ್ದರೂ ಸಹ ವರಿಷ್ಠರು ಪಕ್ಷಕ್ಕೆ ದುಡಿಯದವರಿಗೆ ಕೆಲವೊಂದು ನಾಮನಿರ್ದೇಶನ ಮತ್ತು ಪಕ್ಷದ ಅಧಿಕಾರ ನೀಡಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನು ಶಿಫಾರಸ್ಸು ಮಾಡಿದವರನ್ನು ಬಿಟ್ಟು ನಾಗರಾಜ ನಂದಾಪುರ ಎನ್ನುವರನ್ನು ನೇಮಕ ಮಾಡಿದ್ದಾರೆ ಎಂದು ದೂರಿದರು.
ವರ್ಗಾವಣೆಗೆ ದಂಧೆ:ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಾಕಷ್ಟು ಹಣ ಪಡೆದು ದಲ್ಲಾಳಿತನ ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಡರನ್ನು ವಿಶ್ವಾಸಕ್ಕೆ ಪಡೆದು ಸಚಿವ ಶಿವರಾಜ ತಂಗಡಗಿ ಮತ್ತು ಸಂಸದ ರಾಜಶೇಖರ್ ಹಿಟ್ನಾಳ್ ಅಧಿಕಾರ ಚಲಾವಣೆ ಮಾಡುವದು ಬಿಟ್ಟು, ಇಬ್ಬರೂ ಸೇರಿ ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಉದ್ಭವಿಸುವದಕ್ಕೆ ಕಾರಣರಾಗಿದ್ದಾರೆಂದು ಆರೋಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇವಲ ಕನಕಗಿರಿ ಸಂಬಂಧ ಅಲ್ಲ, ಗಂಗಾವತಿಯ ಕೆಲ ಭಾಗವು ಸಹ ಸಚಿವರ ವ್ಯಾಪ್ತಿಗೆ ಬರುತ್ತದೆ. ಆದರೆ ಇವರು ಪಕ್ಷಕ್ಕೆ ದುಡಿದವರನ್ನು ಬಿಟ್ಟು ಅನ್ಯ ಪಕ್ಷದವರಿಗೆ ಮಣೆ ಹಾಕಿ ನೇಮಕ ಮಾಡಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬೂತ್ ಮಟ್ಟದ ಪ್ರತಿನಿಧಿಯನ್ನಾಗಿ ಸಂಸದ ರಾಜಶೇಖರ್ ಹಿಟ್ನಾಳ್ ಅವರನ್ನು ನೇಮಕ ಮಾಡಿದ್ದಾರೆ. ಗಂಗಾವತಿಯಲ್ಲಿ ಯಾವ ನಾಯಕರೂ ಇಲ್ಲವೇ ? ಎಂದು ಪ್ರಶ್ನಿಸಿದರು. ಆಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ ಬೂತ್ ಮಟ್ಟದ ಪ್ರತಿನಿಧಿಯಾಗಿ ಮಾಡಿದ್ದಾರೆ. ಪರಾಭವಗೊಂಡವರಿಗೆ ಏಕೆ ಅಧಿಕಾರ ನೀಡಿಲ್ಲ. ಸಂಸದರು ಇದನ್ನು ಅರ್ಥೈಸಿಕೊಳ್ಳಬೇಕಾಗಿತ್ತು ಎಂದರು.
ಈ ವೇಳೆ ಮುಖಂಡರುಗಳಾದ ರಾಜಶೇಖರ ಮೂಸ್ಟೂರು, ಗೌಳಿ ರಮೇಶ, ಸುರೇಶ ಗೌರಪ್ಪ, ವಸಂತ ಜೋಗದ, ಮಹೇಶ ಸಾಗರ, ವೀರನಗೌಡ ವಡ್ಡರಹಟ್ಟಿ, ಶೇಖರಗೌಡ ಗೌಡರ್, ಅಯೂಬ್ ಖಾನ್ ಸೇರಿದಂತೆ ಪ್ರಮುಖರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.