ಮುಂಡರಗಿಯಲ್ಲಿ ನಿರಾಶ್ರಿತರಿಗೆ ದೊರೆಯದ ನಿವೇಶನ

KannadaprabhaNewsNetwork |  
Published : May 20, 2026, 01:00 AM IST
19ಎಂಡಿಜಿ1, ಮುಂಡರಗಿ ಪುರಸಭೆ ಎದುರಿನಲ್ಲಿ ನಿರಾಶ್ರಿತರಿಗೆ ಆಶ್ರಯ ನಿವೇಶನ ನೀಡುವಂತೆ ಕಿಸಾನ್ ಜಾಗೃತಿ ವಿಕಾಸ ಸಂಘದಿಂದ ಮಂಗಳವಾರವೂ ಧರಣಿ ಸತ್ಯಾಗ್ರಹ ತಾಲೂಕಾ ಅಧ್ಯಕ್ಷ ವಿ.ಎಸ್.ಘಟ್ಟಿಯವರ ನೇತೃತ್ವದಲ್ಲಿ ಮುಂದುವರೆಯಿತು.      | Kannada Prabha

ಸಾರಾಂಶ

ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನ ಸಹಕಾರದಿಂದ ಪುರಸಭೆ ವ್ಯಾಪ್ತಿಯ ಶಿರೋಳದ ಹತ್ತಿರ 24 ಎಕರೆ ಜಮೀನು ಖರೀದಿಸಿದರು. ಜಮೀನು ಖರೀದಿಸಿ 9 ವರ್ಷ ಕಳೆದಿದ್ದರೂ ಫಲಾನುಭವಿಗಳಿಗೆ ನಿವೇಶನ ಇನ್ನೂ ಮರೀಚಿಕೆಯಾಗಿವೆ.

ಶರಣು ಸೊಲಗಿಮುಂಡರಗಿ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎನ್ನುವಂತೆ ಸರ್ಕಾರದಿಂದ ನಿರಾಶ್ರಿತರಿಗೆ ನಿವೇಶನ ನೀಡುವುದಕ್ಕಾಗಿ 2017ರಲ್ಲಿಯೇ 24 ಎಕರೆ ಜಮೀನು ಖರೀದಿಸಿದ್ದರೂ ಪುರಸಭೆ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳು ನಿರಾಸಕ್ತಿಯಿಂದಾಗಿ ಇದುವರೆಗೂ ಅರ್ಹ ಫಲಾನುಭವಿಗಳಿಗೆ ನಿವೇಶನಗಳು ದೊರೆತಿಲ್ಲ.

ಪುರಸಭೆಯ 23 ವಾರ್ಡುಗಳಲ್ಲಿ ಸಾವಿರಾರು ಜನ ಸ್ವಂತ ಮನೆಯಿಲ್ಲದೇ ನಿರಾಶ್ರಿತರಿದ್ದು, ಎಲ್ಲರಿಗೂ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ 2017ರಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನ ಸಹಕಾರದಿಂದ ಪುರಸಭೆ ವ್ಯಾಪ್ತಿಯ ಶಿರೋಳದ ಹತ್ತಿರ 24 ಎಕರೆ ಜಮೀನು ಖರೀದಿಸಿದರು. ಜಮೀನು ಖರೀದಿಸಿ 9 ವರ್ಷ ಕಳೆದಿದ್ದರೂ ಫಲಾನುಭವಿಗಳಿಗೆ ನಿವೇಶನ ಇನ್ನೂ ಮರೀಚಿಕೆಯಾಗಿವೆ.23 ವಾರ್ಡುಗಳಲ್ಲಿ 3ರಿಂದ 4 ಸಾವಿರಕ್ಕೂ ಹೆಚ್ಚು ನಿರಾಶ್ರಿತರ ಅರ್ಜಿಗಳಿದ್ದು, ಅವರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕು ಎನ್ನುವ ಉದ್ದೇಶದಿಂದಲೇ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಈ ಪ್ರಯತ್ನ ಮಾಡಿದ್ದರು. ಆದರೆ ಫಲಾನುಭವಿಗಳಿಗೆ ನಿವೇಶನ ಹಂಚುವಷ್ಟರಲ್ಲಿ ಅವರ ಶಾಸಕರ ಅವಧಿ ಪೂರ್ಣಗೊಂಡಿತು. ಮುಂದೆ ಬಿಜೆಪಿಯ ರಾಮಣ್ಣ ಲಮಾಣಿ ಶಾಸಕರಾದರು.

ರಾಮಣ್ಣ ಲಮಾಣಿ ಅವರ ಅವಧಿಯಲ್ಲಿ ಕೆಲವರು ಮನೆಯಿದ್ದವರು ನಿವೇಶನಕ್ಕೆ ಅರ್ಜಿ ಹಾಕಿದ್ದಾರೆಂದು ರಾಜೀವಗಾಂಧಿ ವಸತಿ ನಿಗಮಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರಿಂದಾಗಿ ನಿವೇಶನಗಳ ಹಂಚಿಕೆ ಆಗಲೇ ಇಲ್ಲ. ನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಡಾ. ಚಂದ್ರು ಲಮಾಣಿ ಶಾಸಕರಾಗಿ ಆಯ್ಕೆಯಾದರು. ಅವರು ಚುನಾವಣೆ ಸಂದರ್ಭದಲ್ಲಿ ತಾವು ಶಾಸಕರಾದರೆ ಒಂದೆರಡು ತಿಂಗಳಿನಲ್ಲಿ ನಿರಾಶ್ರಿತರಿಗೆ ನಿವೇಶನ ನೀಡುವುದು ತಮ್ಮ ಮೊದಲ ಆದ್ಯತೆ ಎಂದಿದ್ದರು. ಇದೀಗ ಶಾಸಕರಾಗಿ ಮೂರು ವರ್ಷವಾದರೂ ನಿವೇಶನ ಹಂಚಿಕೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. 2024ರ ಡಿಸೆಂಬರ್‌ನಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಆಶ್ರಯ ಕಮಿಟಿ ಸಭೆ ನಡೆಸಿ 2024ರ ಡಿಸೆಂಬರ್ ಕೊನೆಯ ಅಥವಾ 2025ರ ಜನವರಿ ಮೊದಲ ವಾರದಲ್ಲಿ ಅರ್ಹ ಆಶ್ರಯ ಫಲಾನುಭವಿಗಳ ಮೊದಲ ಪಟ್ಟಿ ಸಿದ್ಧಪಡಿಸಿ ಪುರಸಭೆ ನೋಟಿಸ್ ಬೋರ್ಡಿಗೆ ಹಚ್ಚಿ, ನಂತರದಲ್ಲಿ ರಾಜೀವ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿ, ಕೆಲವು ನಿರಾಶ್ರಿತರ ಪಟ್ಟಿ ಸಿದ್ಧ ಮಾಡಿದ್ದರು. ಅದರಲ್ಲಿಯೂ ಲೋಪಗಳಿವೆ ಎಂಬ ಆರೋಪದಿಂದಾಗಿ ವಿಳಂಬವಾಗಿದ್ದು, ಇದುವರೆಗೂ ನಿವೇಶನ ಹಂಚಿಕೆ ಆಗಿಲ್ಲ.

ಇದೀಗ ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲ. ಜಿಲ್ಲಾ ಉಪವಿಭಾಗಾಧಿಕಾರಿ ಆಡಳಿತಾಧಿಕಾರಿ ಇದ್ದು, ಶಾಸಕರು ಆಶ್ರಯ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಅಲ್ಲದೇ ಹಾಲಿ ಕಾಂಗ್ರೆಸ್ ಪಕ್ಷದಿಂದ 4 ಜನ ನಾಮನಿರ್ದೇಶಿತ ಆಶ್ರಯ ಸಮಿತಿ ಸದಸ್ಯರಿದ್ದು, ಶಾಸಕರು ಅಧಿಕಾರಿಗಳ ಹಾಗೂ ಆಶ್ರಯ ಕಮಿಟಿ ಜತೆಗೆ ಚರ್ಚೆ ನಡೆಸಿ ನಿವೇಶನ ಹಂಚಿಕೆ ನಿರ್ಧಾರ ಮಾಡಬೇಕೆನ್ನುವುದು ಫಲಾನುಭವಿಗಳ ಒತ್ತಾಯವಾಗಿದೆ. ಇದೀಗ ಕಳೆದ ಎರಡು ದಿನಗಳಿಂದ ಕಿಸಾನ್ ಜಾಗೃತಿ ವಿಕಾಸ ಸಂಘದಿಂದ ನಿವೇಶನ ಹಂಚಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಸಹ ನಡೆಯುತ್ತಿದೆ. ಶಾಸಕರು ಯಾವ ನಿರ್ಧಾರ ಕೈಗೊಳ್ಳುವರೋ ಕಾದು ನೋಡಬೇಕಿದೆ.

ನಿವೇಶನ ಹಂಚಿಕೆಗೆ ಆಗ್ರಹ: ಇದುವರೆಗೂ ಪುರಸಭೆಯಲ್ಲಿ ಆಶ್ರಯ ಸಮೀತಿ ಇರಲಿಲ್ಲ. ಇದೀಗ ಸರ್ಕಾರದಿಂದ ಆಶ್ರಯ ಸಮಿತಿಗೆ 4 ಜನ ನಾನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಿದ್ದು, ಶಾಸಕರೇ ಆ ಸಮಿತಿಯ ಅಧ್ಯಕ್ಷರಾಗಿರುವುದರಿಂದ ತಕ್ಷಣವೇ ಆಶ್ರಯ ಸಮಿತಿ ಸದಸ್ಯರ ಹಾಗೂ ಆಡಳಿತಾಧಿಕಾರಿಗಳ ಸಭೆ ಕರೆದು ಚರ್ಚಿಸುವುದರ ಜತೆಗೆ ಪಟ್ಟಣದ ಎಲ್ಲ ಪಕ್ಷಗಳ ಮುಖಂಡರ ಜತೆಗೆ ಚರ್ಚಿಸಿ ಅರ್ಹ ನಿರಾಶ್ರಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಶಾಸಕರು ಮುಂದಾಗಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೃತ ೨.೦ ಕುಡಿಯುವ ನೀರಿನ ಕಾಮಗಾರಿ ಅಧ್ವಾನ
ಸ್ಥಳೀಯ ಕಾಂಗ್ರೆಸ್‌ ಮುಖಂಡರ ಕಡೆಗಣನೆ: ಶ್ರೀನಾಥ ಆಕ್ರೋಶ