ಕಣಸಗಿರಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಜನತೆ

KannadaprabhaNewsNetwork |  
Published : May 20, 2026, 01:00 AM IST
 | Kannada Prabha

ಸಾರಾಂಶ

ತಾಲೂಕಿನ ಚಿತ್ತಾಕುಲ ವ್ಯಾಪ್ತಿಯ ಕಣಸಗಿರಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಅಡ್ಡಾಡುತ್ತಾ, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ತಾಲೂಕಿನ ಚಿತ್ತಾಕುಲ ವ್ಯಾಪ್ತಿಯ ಕಣಸಗಿರಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಅಡ್ಡಾಡುತ್ತಾ, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ಈ ಮೂಲಕ ದಿನವಿಡೀ ಭಯದಲ್ಲಿಯೇ ಕಾಲ ಕಳೆಯುತ್ತಿದ್ದ ಗ್ರಾಮಸ್ಥರು ಇದೀಗ ನಿರಾಳರಾಗಿದ್ದಾರೆ.

ಕಣಸಗಿರಿ ಗ್ರಾಮ ಹಾಗೂ ಸುತ್ತ ಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಈ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಕೇವಲ ಕಾಣಿಸಿಕೊಳ್ಳುವುದಷ್ಟೇ ಅಲ್ಲದೇ, ಮೇಯಲು ಬಿಟ್ಟಿದ್ದ ಜಾನುವಾರುಗಳ ಮೇಲೆ ಏಕಾಏಕಿ ದಾಳಿ ನಡೆಸುತ್ತಿತ್ತು. ಜೊತೆಗೆ, ಗ್ರಾಮದಲ್ಲಿನ ಹಲವು ಸಾಕು ನಾಯಿಗಳನ್ನು ಹೊತ್ತೊಯ್ದು ತಿಂದ ಘಟನೆಗಳೂ ವರದಿಯಾಗಿದ್ದವು. ಸಂಜೆಯಾಗುತ್ತಿದ್ದಂತೆ ಚಿರತೆ ಭಯದಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಭಯಭೀತರಾದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಚಿರತೆ ಸೆರೆಹಿಡಿಯುವಂತೆ ಆಗ್ರಹಿಸಿದ್ದರು.

ಗ್ರಾಮಸ್ಥರ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ನಿಯಮಿತವಾಗಿ ಸಂಚರಿಸುತ್ತಿದ್ದ ಜಾಗಗಳನ್ನು ಗುರುತಿಸಿ ಆಯಕಟ್ಟಿನ ಸ್ಥಳದಲ್ಲಿ ಬೋನು ಅಳವಡಿಸಿದ್ದರು. ಸೋಮವಾರ ರಾತ್ರಿ ಆಹಾರ ಅರಸಿ ಬಂದ ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಬೋನಿನೊಳಗೆ ಲಾಕ್ ಆಗಿದೆ.

ಮಂಗಳವಾರ ಬೆಳಗ್ಗೆ ಬೋನಿನಲ್ಲಿ ಚಿರತೆ ಸೆರೆಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ, ಅದನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾಯಿಸಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸೆರೆಯಾದ ಚಿರತೆಯ ಆರೋಗ್ಯ ಪರಿಶೀಲಿಸಿ, ಅಗತ್ಯ ಸುರಕ್ಷತಾ ಕ್ರಮ ಕೈಗೊಂಡರು. ನಂತರ ಅದನ್ನು ಜನವಸತಿ ಇಲ್ಲದ ಸಮೀಪದ ದಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಚಿರತೆ ಸೆರೆಯಾದ ಬಳಿಕ ಕಣಸಗಿರಿ ಗ್ರಾಮದಲ್ಲಿ ಮಡುಗಟ್ಟಿದ್ದ ಆತಂಕ ದೂರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೃತ ೨.೦ ಕುಡಿಯುವ ನೀರಿನ ಕಾಮಗಾರಿ ಅಧ್ವಾನ
ಸ್ಥಳೀಯ ಕಾಂಗ್ರೆಸ್‌ ಮುಖಂಡರ ಕಡೆಗಣನೆ: ಶ್ರೀನಾಥ ಆಕ್ರೋಶ