-ಆಯನೂರು ಮಂಜುನಾಥ್ ಆರೋಪ । ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ । ಮುಸ್ಲಿಂ, ಕ್ರೈಸ್ತ ಮುಖಂಡರ ಬೇಸರ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ ಎಂದು ಮುಸ್ಲಿಂ ಹಾಗೂ ಕ್ರೈಸ್ತ ಮುಂಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಅವರ ಕೋರಿಕೆಯ ಮೇರೆಗೆ ಅವರ ಮನವಿಯನ್ನು ಕಾಂಗ್ರೆಸ್ ನಾಯಕರಿಗೆ ತಿಳಿಸುತ್ತೇನೆ. ಪಕ್ಷಕ್ಕೆ ಈ ಸಮುದಾಯಗಳು ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಕೂಡ ಮನದಟ್ಟು ಮಾಡುತ್ತೇನೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಪ್ರಾಧಿಕಾರ ಮತ್ತು ನಿಗಮ ಮಂಡಳಿಗಳಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡುವಂತೆ ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ಒಬ್ಬರಿಗೆ ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಆದರೆ, ಸರ್ಕಾರ ಬಂದು ಮೂರೂವರೆ ವರ್ಷ ಕಳೆದಿದ್ದರೂ ಈ ಭರವಸೆ ಈಡೇರಿಲ್ಲ. ಈಗ ಹೊಸ ಮುಖ್ಯಮಂತ್ರಿಗಳು ಬಂದಿದ್ದಾರೆ. ಈ ಸಂದರ್ಭದಲ್ಲಾದರೂ ಕೊಟ್ಟ ಮಾತು ಈಡೇರಿಸಬೇಕು ಎಂಬುದು ಅಲ್ಪಸಂಖ್ಯಾತರ ಒತ್ತಾಯವಾಗಿದೆ.
ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಶೇ.100ರಷ್ಟು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ಈ ಎರಡು ಸಮುದಾಯಗಳ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಮುಸ್ಲಿಮರಿಗೆ ಮೀಸಲಾಗಿರುವ ವಕ್ಪ್ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಸ್ಥಳೀಯ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಆಗಿರುವ ಅನ್ಯಾಯವನ್ನು ನಾನು ಖುದ್ದಾಗಿ ಸಿಎಂ ಡಿ.ಕೆ. ಶಿವಕುಮಾರ್. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರನ್ನು ಬಿಟ್ಟು ಚುನಾವಣೆ ನಡೆಸುವುದು ಸಾಧ್ಯವಿಲ್ಲ. ಪಕ್ಷ ಸಂಘಟನೆ ಕಷ್ಟವಾಗಲಿದೆ, ಜಿಲ್ಲೆಯಲ್ಲಿ ರಾಜಕೀಯದ ಪರಿಸ್ಥಿತಿಯನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತೇನೆ. ಅಲ್ಪಸಂಖ್ಯಾತರ ಪರ ನಿಲ್ಲುತ್ತೇನೆ ಎಂದು ತಿಳಿಸಿದರು.
ಪೊಟೋ: 28ಎಸ್ಎಂಜಿಕೆಪಿ01