ತಾಲೂಕಾಡಳಿತದಿಂದ ಜನಪ್ರತಿನಿಧಿಗಳ ನಿರ್ಲಕ್ಷ್ಯ

KannadaprabhaNewsNetwork | Published : Nov 27, 2024 1:04 AM

ಸಾರಾಂಶ

ಒಂದು ವೇಳೆ ನಾವಾಗಿಯೇ ಕಾರ್ಯಕ್ರಮಗಳಿಗೆ ಬಂದರೂ ನಮ್ಮ ಜತೆಗೆ ಗೌರವದಿಂದ ನಡೆದುಕೊಳ್ಳುವುದಿಲ್ಲ

ಮುಂಡರಗಿ: ತಾಲೂಕಾಡಳಿತದಿಂದ ಜರುಗುವ ವಿವಿಧ ಮಹಾತ್ಮರ ಹಾಗೂ ಸಂತ, ಶರಣರ ಜಯಂತಿ ಆಚರಣೆ ಹಾಗೂ ರಾಷ್ಟ್ರೀಯ ಹಬ್ಬಗಳಿಗೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ನಿರ್ಲಕ್ಷಿಸಿ ಅವಮಾನಿಸಲಾಗುತ್ತಿದೆ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಆಕ್ರೋಶ ವ್ಯಕ್ತ ಪಡಿಸಿದರು.

ಮಂಗಳವಾರ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಹಸೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಜರುಗಿದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾವು ಸದಸ್ಯರಾಗಿ ಸುಮಾರು 5ವರ್ಷ ಕಳೆಯುತ್ತಾ ಬಂದಿದ್ದು, ಇದೀಗ ತಾವು ಪುರಸಭೆ ಉಪಾಧ್ಯಕ್ಷರಾಗಿ ಸುಮಾರು ನಾಲ್ಕು ತಿಂಗಳುಗಳಾಗಿದ್ದು, ತಾಲೂಕಾಡಳಿತದಿಂದ ತಮಗಾಗಲಿ, ಅಧ್ಯಕ್ಷರಿಗಾಗಲಿ, ಸದಸ್ಯರಿಗಾಗಲಿ ಯಾವುದೇ ಸರ್ಕಾರಿ ಜಯಂತಿಗಳಿಗಾಗಲಿ, ರಾಷ್ಟ್ರೀಯ ಹಬ್ಬಗಳಾದ ಜ.26, ಆ.15 ಮತ್ತು ನ.1ರ ಕಾರ್ಯಕ್ರಮಗಳಿಗೆ ನಮಗೆ ಆಹ್ವಾನಿಸುತ್ತಿಲ್ಲ. ಒಂದು ವೇಳೆ ನಾವಾಗಿಯೇ ಕಾರ್ಯಕ್ರಮಗಳಿಗೆ ಬಂದರೂ ನಮ್ಮ ಜತೆಗೆ ಗೌರವದಿಂದ ನಡೆದುಕೊಳ್ಳುವುದಿಲ್ಲ. ಈ ವಿಷಯವಾಗಿ ಶೀಘ್ರವೇ ಜಿಲ್ಲಾಧಿಕಾರಿಗೆ ಭೇಟಿ ನೀಡಿ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಲಾಗುವುದು ಎಂದರು.

ಪ್ರತಿ ವರ್ಷ ನ. 26 ರಂದು ಭಾರತದ ಸಂವಿಧಾನದ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡುವ ಮೂಲಕ ಈ ದಿನದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಸಹ ಸಂವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದರು.

ಡಿಎಸ್ಎಸ್ ಮುಖಂಡ ಎಚ್.ಡಿ. ಪೂಜಾರ ಮಾತನಾಡಿ, ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವೆಂದರೆ ಅದು ನಮ್ಮ ಭಾರತೀಯ ಸಂವಿಧಾನ. ಅಂಬೇಡ್ಕರ್ ಮನುವಾದಿ ಸಂಸ್ಕೃತಿ ವಿರೋಧಿಸುತ್ತಿದ್ದರು. ಎಲ್ಲರನ್ನೂ ಸಮಾನತೆಯಿಂದ ಕಾಣುವ ಉದ್ದೇಶ ಅಂಬೇಡ್ಕರ್ ಅವರದ್ದಾಗಿತ್ತು. ಸ್ತ್ರೀಯರಿಗೆ ಎಲ್ಲ ರಂಗಗಳಲ್ಲಿ ಅವಕಾಶ ನೀಡಿದವರು ಡಾ. ಬಿ.ಆರ್.ಅಂಬೇಡ್ಕರ್. ಅವರು ಎಲ್ಲರಿಗೂ ಮೀಸಲಾತಿ ಕೊಟ್ಟಿದ್ದಾರೆ. ಯಾವ ಸಮುದಾಯಕ್ಕೂ ಭೇದ ಭಾವ ಮಾಡಿಲ್ಲ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇನ್ನು ಮುಂದೆ ಜನಪ್ರತಿನಿಧಿಗಳಿಗೆ ಸರ್ಕಾರದ ನಿಯಮದ ಪ್ರಕಾರ ಆಹ್ವಾನಿಸುವುದಾಗಿ ಹೇಳಿದರು. ನಾಗೇಶ ಹುಬ್ಬಳ್ಳಿ ಎಲ್ಲರಿಗೂ ಸಂವಿಧಾನ ಪೀಠಿಕೆ ಓದಿಸಿದರು.

ಈ ಸಂದರ್ಭದಲ್ಲಿ ರಾಜಾಭಕ್ಷಿ ಬೆಟಗೇರಿ, ಲಕ್ಷ್ಮಣ ತಗಡಿನಮನಿ, ದುರಗಪ್ಪ ಹರಿಜನ, ಅಡಿವೆಪ್ಪ ಛಲವಾದಿ, ಮಂಜು ಮುಧೋಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣಾ ಸೋರಗಾವಿ, ಅಬಕಾರಿ ಅಧಿಕಾರಿ ಸುವರ್ಣ ಕೋಟಿ, ಅಲ್ಪಸಂಖ್ಯಾತ ವಸತಿ ನಿಲಯದ ಅಧಿಕಾರಿ ಸವಿತಾ ಸಾಸ್ವಿಹಳ್ಳಿ, ಬಿಆರ್‌ಸಿ ಸಮನ್ವಯಾಧಿಕಾರಿ ಗಂಗಾಧರ ಅಣ್ಣೀಗೇರಿ, ಸಾಮಾಜಿಕ ಅರಣ್ಯ ಅಧಿಕಾರಿ ಸುನಿತಾ, ಮಂಜುಳಾ ಸಜ್ಜನರ, ಸುರೇಶ ಕಲ್ಲಕುಟಗರ್, ಸಿದ್ದಪ್ಪ ಮುದ್ಲಾಪೂರ, ಮನೋಹರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಯಲ್ಲಪ್ಪ ನಾಗಮ್ಮನವರ ನಿರೂಪಿಸಿ ವಂದಿಸಿದರು.

Share this article