ಅರ್ಹರ ಗುರುತಿಸಿ ನಿವೇಶನ ನೀಡಿ

KannadaprabhaNewsNetwork | Published : Nov 27, 2024 1:04 AM

ಸಾರಾಂಶ

ನಗರದಲ್ಲಿ ಕಡು ಬಡತನದಲ್ಲಿರುವ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ನೀಡುವುದೇ ಆಶ್ರಯ ಸಮಿತಿಯ ಉದ್ದೇಶ. ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಪರೀಶೀಲನೆ ಮಾಡಿ ಪಟ್ಟಿ ಮಾಡಬೇಕು, ಈಗಾಗಲೇ ಮನೆಯಿದ್ದು ನಿವೇಶನ ಕೇಳುವವರಿಗೆ ನೀಡುವಂತಿಲ್ಲ. ಸಮಿತಿಯ ಸದಸ್ಯರು ಪಾರದರ್ಶಕವಾಗಿ ಸೇವೆ ಸಲ್ಲಿಸಲಿ.

ಕನ್ನಡಪ್ರಭ ಗೌರಿಬಿದನೂರು

ಆಶ್ರಯ ಸಮಿತಿ ಸದಸ್ಯರು ನಗರದಲ್ಲಿ ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ನೀಡಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.ನಗರದ ನಗರಸಭೆ ಸಭಾಂಗಣದಲ್ಲಿ ತಾಲೂಕು ಆಶ್ರಯ ಸಮಿತಿಗೆ ಸರ್ಕಾರದಿಂದ ನೇಮಕಗೊಂಡ ಸದಸ್ಯರಿಗೆ ಏರ್ಪಡಿಸಿದ್ದ ಪರಿಚಯಾತ್ಮಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದಲ್ಲಿ ಕಡು ಬಡತನದಲ್ಲಿರುವ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ನೀಡುವುದೇ ಆಶ್ರಯ ಸಮಿತಿಯ ಉದ್ದೇಶ ಎಂದರು.

ಪಾರದರ್ಶಕವಾಗಿ ಸೇವೆ ಸಲ್ಲಿಸಿ

ಈ ಸಮಿತಿಗೆ ಆಯ್ಕೆಯಾದ ಸದಸ್ಯರು, ಶಾಸಕರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಪರೀಶೀಲನೆ ಮಾಡಿ ಪಟ್ಟಿ ಮಾಡಬೇಕು, ಈಗಾಗಲೇ ಮನೆಯಿದ್ದು ನಿವೇಶನ ಕೇಳುವವರಿಗೆ ನೀಡುವಂತಿಲ್ಲ. ಸಮಿತಿಯ ಸದಸ್ಯರು ಯಾವುದೇ ಲೋಪದೋಷಗಳಾಗದಂತೆ, ಭ್ರಷ್ಟಾಚಾರ ನೆಡಸದೆ, ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಜನರ ಪರಿಸ್ಥಿತಿಯ ಅರಿವಿದೆ

ಇದೇ ವೇಳೆ ನೂತನವಾಗಿ ಆಯ್ಕೆಯಾದ ಆಶ್ರಯ ಸಮಿತಿ ಸದಸ್ಯ ನಾಗೇಂದ್ರ ಮಾತನಾಡಿ, ನಮ್ಮನ್ನು ಆಯ್ಕೆ ಮಾಡಿದ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಕೂಡ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು 20 ವರ್ಷಗಳಾಗಿವೆ, ಆಟೋ ಚಾಲಕರು, ಹೂವು ಮಾರುವವರು, ಬೀದಿ ಬದಿ ವ್ಯಾಪಾರ ಮಾಡುವವರು, ಕಾರ್ಮಿಕರು ಸೇರಿದಂತೆ ವಿವಿಧ ರೀತಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವವರ ಪರಿಸ್ಥಿತಿ ನಮಗೆ ಗೊತ್ತಿದೆ. ಇಂತಹವರಿಗೆ ನಿವೇಶನ ನೀಡುವ ಸಮಿತಿಗೆ ನಮ್ಮನ್ನು ಆಯ್ಕೆ ಮಾಡಿದ ಶಾಸಕರಿಗೆ ಧನ್ಯವಾದ. ಶಾಸಕರು ಮಾರ್ಗದರ್ಶನದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿದರು.ಸಭೆಯಲ್ಲಿ ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಪರೀಧ್ ಮತ್ತು ಆಶ್ರಯ ಸಮಿತಿ ಸದಸ್ಯರಾದ ಕಲಂದರ್, ಗೋವಿಂದರಾಜು, ಲಯನ್ ಲಕ್ಷ್ಮಿ ಹಾಗೂ ಮುಖಂಡರಾದ ಶ್ರೀನಿವಾಸಗೌಡ, ಅಲ್ತಾಫ್, ಅಸ್ಲಾಂ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Share this article