ಮುಷ್ಕರದ ಬಗ್ಗೆ ನಿರ್ಲಕ್ಷ್ಯ: ಪ್ರತಿಭಟನಾಕಾರರ ಆಕ್ರೋಶ

KannadaprabhaNewsNetwork | Published : Oct 8, 2024 1:15 AM

ಸಾರಾಂಶ

ಬೇಡಿಕೆಗಳನ್ನು ಮುಂದಿಟ್ಟು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಎಲ್ಲರೂ ಏಕಕಾಲಕ್ಕೆ ಹೋರಾಟಕ್ಕಿಳಿದಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡುವುದಕ್ಕೆ ಯಾರೂ ಇಲ್ಲದಂತಾಗಿದ್ದು, ನಿತ್ಯದ ಕಚೇರಿ ಕೆಲಸ ಕಾರ್ಯಗಳೆಲ್ಲವೂ ಸಂಪೂರ್ಣ ಸ್ಥಗಿತಗೊಂಡಿವೆ. ಗ್ರಾಪಂ ಕಚೇರಿಗಳಿಗೆ ಬೀಗ ಹಾಕುವ ಸ್ಥಿತಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಒಕ್ಕೂಟದವರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡದಿರುವುದರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ.

ಅ.೪ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸಿದ ವೇಳೆ ಸರ್ಕಾರ ಹೋರಾಟಕ್ಕೆ ಮಣಿದು ಸಭೆ ಕರೆದು ಬೇಡಿಕೆಗಳ ವಿಚಾರವಾಗಿ ಚರ್ಚೆ ನಡೆಸಿತ್ತು. ಈ ಸಂಬಂಧ ಯಾವುದೇ ಆದೇಶವನ್ನು ಮಾಡದೆ ನಡವಳಿಯಲ್ಲೇ ಕಾಲಹರಣ ಮಾಡುತ್ತಿರುವುದರ ವಿರುದ್ಧ ಕಿಡಿಕಾರಿದರು. ಬೇಡಿಕೆಗಳು ಈಡೇರುವ ತನಕ ಹೋರಾಟ ಮುಂದುವರೆಸಲು ತೀರ್ಮಾನಿಸಿದ್ದಾರೆ.

ಪಂಚಾಯ್ತಿ ಕಚೇರಿಗಳು ಖಾಲಿ ಖಾಲಿ:

ಬೇಡಿಕೆಗಳನ್ನು ಮುಂದಿಟ್ಟು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಎಲ್ಲರೂ ಏಕಕಾಲಕ್ಕೆ ಹೋರಾಟಕ್ಕಿಳಿದಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡುವುದಕ್ಕೆ ಯಾರೂ ಇಲ್ಲದಂತಾಗಿದ್ದು, ನಿತ್ಯದ ಕಚೇರಿ ಕೆಲಸ ಕಾರ್ಯಗಳೆಲ್ಲವೂ ಸಂಪೂರ್ಣ ಸ್ಥಗಿತಗೊಂಡಿವೆ. ಗ್ರಾಪಂ ಕಚೇರಿಗಳಿಗೆ ಬೀಗ ಹಾಕುವ ಸ್ಥಿತಿ ಎದುರಾಗಿದೆ.

ಕೆಲಸಗಳೆಲ್ಲವೂ ಸ್ತಬ್ಧ:

ಜಮೀನುಗಳ ಖಾತೆ, ಖಾತೆ ಬದಲಾವಣೆ, ಸರ್ವೆ ನಂಬರ್ ಒಗ್ಗೂಡಿಸುವಿಕೆ, ಜಮೀನುಗಳ ಸರ್ವೆ, ದುರಸ್ತು, ತತ್ಕಾಲ್ ಪೋಡಿ, ಅಗತ್ಯ ದಾಖಲೆ ಪಡೆಯವುದು ಸೇರಿದಂತೆ ಬಹುತೇಕ ಕೆಲಸಗಳು ಪಂಚಾಯ್ತಿಗಳ ಮೂಲಕವೇ ನಡೆಯಬೇಕಿದೆ. ಜೊತೆಗೆ ಇವೆಲ್ಲಾ ಕೆಲಸಕ್ಕೂ ಆನ್‌ಲೈನ್ ಮೂಲಕವೇ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಿರುವುದರಿಂದ ಆ ಎಲ್ಲಾ ಸೇವೆಗಳು ಸ್ತಬ್ಧವಾಗಿವೆ. ಅಲ್ಲದೇ, ಈಗಾಗಲೇ ವಿವಿಧ ಕೆಲಸಗಳಿಗಾಗಿ ಆನ್‌ಲೈನ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ಕೂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘದವರ ಹೋರಾಟ ಮುಗಿಯುವವರೆಗೆ ಕಾದು ಕೂರುವುದು ಅನಿವಾರ್ಯವಾಗಲಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘ, ಗ್ರಾಪಂ ಸದಸ್ಯರ ಒಕ್ಕೂಟದವರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರೂ ಸರ್ಕಾರ ಇನ್ನೂ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬಂದಿಲ್ಲ. ಪ್ರತಿಭಟನಾಕಾರರು ಪಟ್ಟು ಸಡಿಲಿಸದೆ ಹೋರಾಟ ಮುಂದುವರೆಸಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಭುಗೌಡ, ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಎ.ಪ್ರಶಾಂತ್‌ಬಾಬು, ಗ್ರಾಪಂ ಸದಸ್ಯರ ಒಕ್ಕೂಟದ ರಾಜ್ಯಸಂಚಾಲಕ ನಾಗೇಶ್, ಮಂಡ್ಯ ಸದಸ್ಯರ ಒಕ್ಕೂಟದ ಗೌರವಾಧ್ಯಕ್ಷ ಬೇವಿನಹಳ್ಳಿ ಮಹೇಶ್, ಅಧ್ಯಕ್ಷ ಪ್ರದೀಪ್ ಸಿದ್ದೇಗೌಡ, ಉಪಾಧ್ಯಕ್ಷೆ ಸುವರ್ಣಾವತಿ ಇತರರಿದ್ದರು.

ಪ್ರತಿಭಟನೆಗೆ ಸಚ್ಚಿದಾನಂದ ಬೆಂಬಲ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಬೆಂಬಲ ವ್ಯಕ್ತಪಡಿಸಿದರು. ರಾಜ್ಯಸರ್ಕಾರ ಕೂಡಲೇ ಎಲ್ಲರ ಬೇಡಿಕೆಗಳಿಗೆ ಸ್ಪಂದಿಸಬೇಕು. ಪಂಚಾಯಿತಿ ಮಟ್ಟದ ಆಡಳಿತ ಸುಗಮವಾಗಿ ನಡೆಯುವುದಕ್ಕೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.

Share this article