ಪರಿಸರ ನಿರ್ಲಕ್ಷಿಸಿದರೆ ಮಾನವ ಕುಲಕ್ಕೆ ಆಪತ್ತು

KannadaprabhaNewsNetwork | Published : Dec 24, 2024 12:47 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪರಿಸರ ತುಂಬ ಮಾಲಿನ್ಯಗೊಳ್ಳುತ್ತಿದೆ. ಮನುಷ್ಯರು ಪರಿಸರವನ್ನು ನಿರ್ಲಕ್ಷ್ಯ ಮಾಡಿದರೆ ಮನುಕುಲಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗದೇ ಉಸಿರಾಟಕ್ಕೆ ತೊಂದರೆಯಾಗಿ ಭಯಾನಕ ಕಾಯಿಲೆ, ಅಕಾಲಿಕ ಮರಣ ಬರುವ ಕಾಲ ದೂರವಿಲ್ಲ. ಇದರಿಂದಾಗಿ ಪ್ರತಿಯೊಬ್ಬರೂ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ಪ್ರತಿಯೊಂದು ಮನೆಯ ಮುಂದೆ ಸಸಿ ನೆಟ್ಟು ಪೋಷಿಸುವದು ಅಗತ್ಯವಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:

ಪರಿಸರ ತುಂಬ ಮಾಲಿನ್ಯಗೊಳ್ಳುತ್ತಿದೆ. ಮನುಷ್ಯರು ಪರಿಸರವನ್ನು ನಿರ್ಲಕ್ಷ್ಯ ಮಾಡಿದರೆ ಮನುಕುಲಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗದೇ ಉಸಿರಾಟಕ್ಕೆ ತೊಂದರೆಯಾಗಿ ಭಯಾನಕ ಕಾಯಿಲೆ, ಅಕಾಲಿಕ ಮರಣ ಬರುವ ಕಾಲ ದೂರವಿಲ್ಲ. ಇದರಿಂದಾಗಿ ಪ್ರತಿಯೊಬ್ಬರೂ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ಪ್ರತಿಯೊಂದು ಮನೆಯ ಮುಂದೆ ಸಸಿ ನೆಟ್ಟು ಪೋಷಿಸುವದು ಅಗತ್ಯವಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶ್ರೀಗಳು ಹೇಳಿದರು.ಪಟ್ಟಣದ ನಂದಿ ಬಡಾವಣೆಯಲ್ಲಿ ತಾಲೂಕಿನ ನಾಗೂರ ಗ್ರಾಮದ ಶರಣಯ್ಯ ಶೀಕಳವಾಡಿಮಠ ಅವರು ನಿರ್ಮಿಸಿದ ಗೃಹ ಪ್ರವೇಶದಂಗವಾಗಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಶರಣಯ್ಯ ಶೀಕಳವಾಡಿಮಠ ಅವರು ತಮ್ಮ ಗೃಹ ಪ್ರವೇಶದಂಗವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ. ಇವರು ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಸಂತಸದಾಯಕ ಸಂಗತಿ ಎಂದರು.ಸರ್ಕಾರ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ರೈತರ ಕಲ್ಯಾಣದತ್ತ ಹೆಜ್ಜೆ ಹಾಕಬೇಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳಗಡೆ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಹಿಂದೇಟು ಹಾಕಬಾರದು. ಉತ್ತರ ಕರ್ನಾಟಕದ ಬರಡು ಭೂಮಿಯನ್ನು ನೀರಾವರಿ ಮಾಡಲು ಆಲಮಟ್ಟಿ ಜಲಾಶಯದ ಎತ್ತರವನ್ನು ಎತ್ತರಿಸುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪವಾಗಿದೆ. ಮುಂಬರುವ ದಿನಗಳಲ್ಲಿ ಈ ಕುರಿತು ಸಚಿವ ಸಂಪುಟದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಉತ್ತಮವಾದರೂ ಹಲವರನ್ನು ಆಲಸ್ಯ, ಸೋಮಾರಿಗಳನ್ನಾಗಿ ಮಾಡುತ್ತಿದೆ. ದುಡಿಯುವ ಕೈಗಳಿಗೆ ಆ ಯೋಜನೆಗಳು ಮಾರಕವಾಗಬಾರದು. ಸದಾ ದುಡಿಯುವ ಮನುಷ್ಯರು ಹಸನ್ಮುಖಿಯಾಗುವ ಜೊತೆಗೆ ಅವರು ಆರೋಗ್ಯಯುತ ಜೀವನ ಮಾಡಬಹುದು. ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಗ್ಯಾರಂಟಿ ಯೋಜನೆ ಮಾರಕವಾಗಿದೆ ಎಂದರು.ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯರು, ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ದರೇಣುಕ ಶಿವಾಚಾರ್ಯರು, ಸಿಂಧನೂರಿನ ಸೋಮನಾಥ ಶಿವಾಚಾರ್ಯರು, ಬೊಮ್ಮನಹಳ್ಳಿಯ ಗುರುಶಾಂತ ಶಿವಾಚಾರ್ಯರು, ತಡವಲಾಗದ ಅಭಿನಯ ರಾಚೋಟೋಶ್ವರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಮುಳವಾಡದ ವಿರುಪಾಕ್ಷ ಶಿವಾಚಾರ್ಯರು, ದೇವರಹಿಪ್ಪರಗಿಯ ಶಿವಯೋಗಿ ದೇವರು, ಶರಣಯ್ಯ ಶೀಕಳವಾಡಿಮಠ, ಅವರ ಪರಿವಾರ ಸೇರಿದಂತೆ ಹಲವರು ಇದ್ದರು.

Share this article