ಕಿಕ್ಕೇರಿ: ಕಣ್ಣಿನ ಸಮಸ್ಯೆಗೆ ಸ್ವಯಂ ಚಿಕಿತ್ಸೆ, ಮನೆ ಮದ್ದು ಎಂದು ಉದಾಸೀನತೆ ತೋರಿದರೆ ಶಾಶ್ವತ ಕುರುಡರಾಗಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಾಸನದ ಐ ದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಕಣ್ಣಿಲ್ಲದೆ ಬದುಕು ಅಂಧಕಾರ ಎನ್ನುವುದು ಕಣ್ಣಾರೆ ಎಲ್ಲರೂ ಕಂಡಿದ್ದು, ಪುಸ್ತಕ, ಪತ್ರಿಕೆ ಓದುವ ಅಭ್ಯಾಸ ಮರೆತು ಟಿವಿ, ಮೊಬೈಲ್ ವೀಕ್ಷಣೆಯಿಂದ ಮಕ್ಕಳಲ್ಲಿಯೂ ಕಣ್ಣಿನ ಸಮಸ್ಯೆ ಕಾಡುವಂತಾಗಿದೆ. ಇಂತಹ ಹವ್ಯಾಸಗಳಿಂದ ದೂರವಿದ್ದು ಕಣ್ಣು, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಶುಶ್ರೂಷಕಿ ಅಶ್ವಿನಿ, ಬಿಪಿ, ಶುಗರ್, ಥೈರಾಯಿಡ್ ಕುರಿತು ಮಾಹಿತಿ ನೀಡಿದರು. ಐ ದೃಷ್ಟಿ ಆಸ್ಪತ್ರೆ ನೇತ್ರ ತಪಾಸಣೆ ತಜ್ಞ ಆರ್.ಕೆ.ಸಂಜಯ್ ಕಣ್ಣಿನ ಆರೈಕೆ ಕುರಿತು ಮಾತನಾಡಿ, 40 ವರ್ಷಗಳ ನಂತರ ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು.ಸುಜ್ಞಾನಾ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರಗಳನ್ನು ವಿತರಿಸಿದರು. 80 ಮಂದಿ ನೇತ್ರ ತಪಾಸಣೆಗೆ ಒಳಗಾದರು. 4 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ಈ ವೇಳೆ ಕುರುಹಿನಶೆಟ್ಟಿ ಸಂಘದ ಸೂರ್ಯನಾರಾಯಣ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಮೊಟ್ಟೆ ಮಂಜು, ಕುಮಾರ್, ಶಿವರಾಂ, ಸುನೀತಾ, ಒಕ್ಕೂಟದ ಮಾಜಿ ಅಧ್ಯಕ್ಷೆ ವಿಮಲಾ, ನೇತ್ರ ತಪಾಸಣೆ ತಜ್ಞರಾದ ಸಂಜಯ್, ಡಿ.ಎಂ.ಸುಮಾ, ಮೋನಿಷಾ, ಮೇಲ್ವಿಚಾರಕಿ ಶೋಧಾ, ಸೇವಾ ಪ್ರತಿನಿಧಿ ಗೀತಾ, ಜಯಲಕ್ಷ್ಮೀ, ರತ್ನಮ್ಮ ಇದ್ದರು.-----------
18ಕೆಎಂಎನ್ ಡಿ27ಕಿಕ್ಕೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಜರುಗಿತು.