ಆಸ್ಪತ್ರೆ ಸೇವೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಹಿಸಲ್ಲ: ಬೆಲ್ದಾಳೆ

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ಮೂಲ ಸೌಕರ್ಯಕ್ಕೆ ಒತ್ತು ನೀಡಿ, ವೈದ್ಯರಿಗೆ ಡಾ.ಶೈಲೇಂದ್ರ ಬೆಲ್ದಾಳೆ ತಾಕೀತು । ಚಿಟಗುಪ್ಪಾ ತಾಲೂಕಿನ ಮನ್ನಾಎಖ್ಖೇಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ, ಪರಿಶೀಲನೆ
ಬೀದರ್: ಬಡ ರೋಗಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿದು ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ, ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೌಲಭ್ಯ ಒದಗಿಸುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅಧಿಕಾರಿಗಳಿಗೆ ಸೂಚಿಸಿದರು. ಚಿಟ್ಟಗುಪ್ಪಾ ತಾಲೂಕಿನ ಮನ್ನಾಏಖೇಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಧ್ಯಾಹ್ನ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಕಾರಣವಿಲ್ಲದೆ ಸಿಬ್ಬಂದಿ ಗೈರಾದರೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಶಾಸಕರ ಭೇಟಿ ಸಂದರ್ಭದಲ್ಲಿ ಆಸ್ಪತ್ರೆ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡ ಪರಿಶೀಲನೆ ನಡೆಸಿ ಕಾಮಗಾರಿ ಕುರಿತು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ವೈದ್ಯರು, ಸಿಬ್ಬಂದಿ ನಿಷ್ಕಾಳಜಿ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಹಲವು ರೋಗಿಗಳು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದರೆ ಕೆಲವರು ಆಸ್ಪತ್ರೆಗೆ ಚಿಕಿತ್ಸೆಗೆ ಬರಲು ಹೇಳಿ ವೈದ್ಯರೇ ಬಂದಿಲ್ಲ ಎಂದು ತಮ್ಮ ಅಳಲು ಹೇಳಿಕೊಂಡರು. ಈ ಕುರಿತು ಮಾಹಿತಿ ಪಡೆದ ಶಾಸಕರು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರ ಹಾಗೂ ಸಿಬ್ಬಂದಿಯ ಸಭೆ ನಡೆಸಿ ಸೂಚಿಸಿದರು. ಔಷಧಿಗಳನ್ನು ಇಲ್ಲಿಯೇ ಕೊಡಿ, ರೋಗಿಗಳಿಗೆ ಹೊರಗಿನಿಂದ ತರಲು ಚೀಟಿ ಬರೆದು ಕೊಡಬೇಡಿ, ಔಷಧಿ ದಾಸ್ತಾನು ಇರದಿದ್ದರೆ ಹೇಳಿ, ಸರ್ಕಾರದಿಂದ ಅಗತ್ಯ ಔಷಧಿ ಪೂರೈಸುವ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ವೈದ್ಯರಿಗೆ ತಿಳಿಸಿದರು. ಒಳರೋಗಿಗಳು ದಾಖಲಾಗಿರುವ ಕೊಠಡಿಗಳಿಗೆ ಹೋಗಿ ಚಿಕಿತ್ಸೆ ಸರಿಯಾಗಿ ನೀಡಲಾಗುತ್ತಿದೆಯೇ ಎಂದು ರೋಗಿಗಳನ್ನು ಪ್ರಶ್ನಿಸಿದರು. ಬೆಡ್ ಮೇಲೆ ಬೆಡ್ ಶೀಟ್ ಮತ್ತು ಸ್ವಚ್ಛತೆ ಬಗ್ಗೆ ಗಮನಿಸಿದ ಅವರು ಪ್ರತಿನಿತ್ಯ ಬೆಡ್ ಶೀಟ್ ಬದಲಾವಣೆ ಮಾಡಿ ಎಂದು ಆಡಳಿತಾಧಿಕಾರಿ ವೈದ್ಯರಿಗೆ ಸೂಚಿಸಿದರು. ಶೌಚಾಲಯ ಕೋಣೆಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ, ಎಂದು ಹೇಳಿದರು. ರೋಗಿಗಳ ಸಮಸ್ಯೆ ಆಲಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಹೀಗಾಗಲು ಬಿಡುವುದಿಲ್ಲ. ಆಸ್ಪತ್ರೆಯ ಸ್ವಚ್ಛತೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಒದಗಿಸುವಂತೆ ಮಾಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಡಾ. ಲಕ್ಷ್ಮಣ್ ಜಾಧವ್, ಡಾ. ಶೀಲಾ, ಡಾ. ಪ್ರಸಾದ, ಡಾ. ಆಯಷಾ, ಡಾ. ವಿವೇಕಾನಂದ, ಗ್ರಾಪಂ ಪಿಡಿಓ ಭಾಗ್ಯಜ್ಯೋತಿ, ಗ್ರಾಪಂ ಅಧ್ಯಕ್ಷ ರಾಜಕುಮಾರ, ಗ್ರಾಪಂ ಸದಸ್ಯ ಸಂತೋಷ್ ಹಳ್ಳಿಖೇಡ, ಮುಖಂಡರಾದ ಝರೆಪ್ಪ ಹಂದಿಕೇರಾ, ರಾಜಕುಮಾರ ಪಾಂಚಾಳ, ಜಗನ್ನಾಥ ಆರ್ಯ, ಸೈಯದ್ ಆಬೇದ ಅಲಿ ಮತ್ತಿತರರು ಉಪಸ್ಥಿತರಿದ್ದರು.

Share this article