ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ಮಾರಸಿಂಗನಹಳ್ಳಿಯ ರಾಮಕೃಷ್ಣ ಅವರು ತಾಯಿ ಹೆಸರಿನಲ್ಲಿ ನಿಲುವಾಗಿಲು ಗ್ರಾಪಂನಲ್ಲಿ ನಡೆದ ಖಾತೆ ಆಂದೋಲನದಲ್ಲಿ ಸಭೆ ನಡೆಸಿದಾಗ ಎಷ್ಟು ಖಾತೆಗಳು ಅಂಗೀಕರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಕೇಳಿದ್ದರು. ಅವರು ಅರ್ಜಿ ಸಲ್ಲಿಸಿ 24 ವರ್ಷ ಕಳೆದರೂ ಸಹ ಗ್ರಾಪಂ ಪಿಡಿಒಗಳಾಗಿದ್ದ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದರು.
ಈ ಬಗ್ಗೆ ರಾಮಕೃಷ್ಣ ಅವರು ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣದ ಕುರಿತಂತೆ ಎರಡು ವರ್ಷಗಳ ಕಾಲ ಆಯೋಗದಲ್ಲಿ ವಿಚಾರಣೆ ನಡೆಯಿತು. ಅಂತಿಮವಾಗಿ ಆಯೋಗದ ಮಾಹಿತಿ ಆಯುಕ್ತ ಕೆ.ಬದ್ರುದ್ದೀನ್ ಅವರು ಹಾಲಿ ಪಿಡಿಒ ರವಿಕುಮಾರ್ ಅವರಿಗೆ 25 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ದಂಡದ ಹಣವನ್ನು ತಾಪಂ ಇಒ ರಾಮಲಿಂಗಯ್ಯ ಜವಾಬ್ದಾರಿ ತೆಗೆದುಕೊಂಡು ಹಣ ಪಾವತಿ ಮಾಡಬೇಕು. ಪಿಡಿಒ ರವಿಕುಮಾರ್ ವಿರುದ್ಧ ಜಿಪಂ ಸಿಇಒ ನಂದಿನಿ ಅವರು ಶಿಸ್ತುಕ್ರಮ ಜರುಗಿಸಬೇಕು ಎಂದು ಆದೇಶ ನೀಡಿದ್ದಾರೆ.
ಎಲ್ಲ ಅಂಶಗಳ ಆಧಾರದ ಮೇಲೆ ಮಾಹಿತಿ ಹಕ್ಕು ಅಧಿನಿಯಮ 205ರ ಕಲಂ 20(2)ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಏಕೆ ಶಿಫಾರಸ್ಸು ಮಾಡಬಾರದು ಎಂಬ ಬಗ್ಗೆ ಕಾರಣ ಕೇಳಿ ನೋಟೀಸ್‌ಗೆ ಮುಂದಿನ ವಿಚಾರಣೆ ದಿನದಂದು ಮಾಹಿತಿ ಹಕ್ಕು ಅಧಿನಿಯಮದನ್ವಯ ಖುದ್ದು ಹಾಜರಾಗಿ ಆಯೋಗಕ್ಕೆ ತಮ್ಮ ಲಿಖಿತ ಹೇಳಿಕೆ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.