ಟಿಎಲ್‌ಬಿಸಿ ನೀರು ನಿರ್ವಹಣೆಯಲ್ಲಿ ನಿರ್ಲಕ್ಷ್ಯ

KannadaprabhaNewsNetwork | Published : Oct 22, 2023 1:01 AM

ಸಾರಾಂಶ

ಟಿಎಲ್‌ಬಿಸಿ ನೀರು ನಿರ್ವಹಣೆಯಲ್ಲಿ ನಿರ್ಲಕ್ಷ್ಯಕೆಕೆಆರ್‌ಡಿಬಿ ಸಲಹಾ ಸಮಿತಿ, ಬರಗಾಲ, ಕುಡಿಯುವ ನೀರಿನ ಸಭೆಯಲ್ಲಿ ಶಾಸಕರ ಅಸಮಾಧಾನ । ಅನುದಾನ ಹಂಚಿಕೆ ತಾರಮ್ಯಕ್ಕೆ ಬೇಸರ
ಕೆಕೆಆರ್‌ಡಿಬಿ ಸಲಹಾ ಸಮಿತಿ, ಬರಗಾಲ, ಕುಡಿಯುವ ನೀರಿನ ಸಭೆಯಲ್ಲಿ ಶಾಸಕರ ಅಸಮಾಧಾನ । ಅನುದಾನ ಹಂಚಿಕೆ ತಾರಮ್ಯಕ್ಕೆ ಬೇಸರ ಕನ್ನಡಪ್ರಭ ವಾರ್ತೆ ರಾಯಚೂರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆಯಡಿ ಎಲ್ಲ ಕ್ಷೇತ್ರಗಳಿಗೆ ಸಮಾನ ಅನುದಾನ ಹಂಚಿಕೆ ಮಾಡದೇ ಇರುವುದು ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಸರಬರಾಜು ಮಾಡದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ಜಿಲ್ಲೆ ಶಾಸಕರು, ಉಸ್ತುವಾರಿ ಸಚಿವರ ಎದುರು ಅಸಮಾಧಾನ ತೋಡಿಕೊಂಡ ಘಟನೆ ಶನಿವಾರ ನಡೆಯಿತು. ಸ್ಥಳೀಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲೆ ಏಳು ಜನ ಶಾಸಕರು ತಮಗೆ ಎದುರಾಗಿರುವ ಅನುದಾನದ ಕೊರತೆ, ಕೆಳಭಾಗಕ್ಕೆ ನೀರು ಹಾಗೂ ಬರ ನಿರ್ವಹಣೆಯಾಗದ ವಿಚಾರವಾಗಳನ್ನು ಸಚಿವರ ಗಮನಕ್ಕೆ ತಂದರು. ಸರ್ಕಾರ ಅನುದಾನ ಹಂಚಿಕೆ ವಿಚಾರದಲ್ಲಿ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದು, ಕಲ್ಯಾಣ ಕರ್ನಾಟಕ ಸಚಿವರು ಸರ್ಕಾರದ ಜೊತೆಗೆ ಸಮಾಲೋಚನೆ ನಡೆಸಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಕೆಕೆಆರ್‌ಡಿಪಿಯಡಿ ಎಲ್ಲ ಕ್ಷೇತ್ರಗಳ ಶಾಸಕರಿಗೆ ಸಮಾನವಾಗಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮವಹಿಸಬೇಕು ಎಂದು ಕೋರಿದರು. ರಾಜ್ಯ ಸರ್ಕಾರ ಕಾವೇರಿ ನೀರಿಗಾಗಿ ತೋರಿದ ಕಾಳಜಿಯನ್ನು ಟಿಎಲ್‌ಬಿಸಿ ಕೆಳಭಾಗದ ರೈತರ ಸಮಸ್ಯೆಗೆ ತೋರುತ್ತಿಲ್ಲ. ಜಿಲ್ಲೆಯಲ್ಲಿ ದಿನೇ ದಿನೇ ಬರ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಪರಿಹಾರ ಕ್ರಮಕೈಗೊಳ್ಳುವಲ್ಲಿ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು. ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಜಿಲ್ಲೆಯಲಿ ಕುಡಿಯುವ ನೀರಿಗೆ ಕೊರತೆಯಾಗದಂತೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ತ್ವರಿತಗತಿಯಲ್ಲಿ ಒದಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಬರಗಾಲ ಪೀಡಿತ ತಾಲೂಕುಗಳಲ್ಲಿ ಕೈಗೊಳ್ಳಲಾದ ಬೆಳೆ ಸಮೀಕ್ಷೆ ವರದಿ ಆಧರಿಸಿ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರನ್ನು ಸರಬಾರಾಜು ಮಾಡಲು ಎಲ್ಲಾ ರೀತಿ ವ್ಯವಸ್ಥೆ ಮಾಡಿಕೊಳ್ಳಬೇಕು. ಕೈಗಾರಿಕೆಗೆ ಹಾಗೂ ಏತ ನೀರಾವರಿಗೆ ಸದ್ಯದ ಪರಿಸ್ಥಿತಿಯಲ್ಲಿ ನೀರನ್ನು ಬಿಡದೇ ಸ್ಥಗಿತಗೊಳಿಸಿ ಕುಡಿಯುವ ನೀರಿಗೆ ಹೆಚ್ಚಿ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತವೆಂದು ಪರಿಗಣಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ, ಜಿಪಂ ಕಾರ್ಯನಿರ್ವಾಹಕರು ಜಂಟಿಯಾಗಿ ಸಭೆ ನಡೆಸಿ ನೀರಿನ ಕೊರತೆ ನೀಗಿಸಲು ಕ್ರಿಯಾಯೋಜನೆ ತಯಾರಿಸಬೇಕು. ಜಿಲ್ಲೆ ಎಲ್ಲಾ ತಾಪಂಗಳಲ್ಲಿ ಅನುದಾನ ಲಭ್ಯವಿದ್ದು, ಸರ್ಕಾರದಿಂದ 50 ಲಕ್ಷ ರು. ಕುಡಿಯುವ ನೀರಿನ ಕಾಮಗಾರಿಗಳಿಗೆ ಹಾಗೂ 10 ಲಕ್ಷ ರು. ಬೋರ್‌ವೆಲ್‌ಗೆ ಬಳಸುವಂತೆ ಸೂಚಿಸಿದರು. ಪ್ರತಿ ತಾಪಂ ಇಒಗಳು, ಗ್ರಾಪಂಗಳೊಂದಿಗೆ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಬೇಕು. ಪ್ರತಿ ಗ್ರಾಮದಲ್ಲಿ ಕೈಗೊಳ್ಳಲಾದ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಿ ಜನರಿಗೆ ಸರಿಯಾದ ರೀತಿಯಲ್ಲಿ ನೀರು ತಲುಪುವಂತೆ ನೋಡಿಕೊಳ್ಳಬೇಕು. ಎಲ್ಲಾ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಗ್ರಾಪಂಗಳಿಗೆ ನೀರಿನ ಸರಬರಾಜಿಗೆ ಅನುದಾನ ಮೀಸಲಿಡಬೇಕು. ತಹಸೀಲ್ದಾರ್ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಆದ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ತಿಳಿಸಿದರು. ನಗರ ಪ್ರದೇಶದಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾಗಿದ್ದು, ನಗರ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಎನ್.ಎಸ್. ಬೋಸರಾಜು, ಸಂಸದ ಅಮರೇಶ್ವರ ನಾಯಕ, ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಡಿಸಿ ಎಲ್.ಚಂದ್ರಶೇಖರ ನಾಯಕ, ಸಿಇಒ ರಾಹುಲ್ ತುಕಾರಾಮ ಪಾಂಡ್ವ ಸೇರಿದಂತೆ ಇತರೆ ಕ್ಷೇತ್ರಗಳ ಶಾಸಕರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು. - - - - 21ಕೆಪಿಆರ್‌ಸಿಆರ್‌01: ರಾಯಚೂರಿನ ಜಿಪಂ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಸಲಹಾ ಸಮಿತಿ, ಬರಗಾಲ, ಕುಡಿಯುವ ನೀರಿನ ಸಮಸ್ಯೆ ಕುರಿತ ಸಭೆಯು ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಅಧ್ಯಕ್ಷತೆಯಲ್ಲಿ ಜರುಗಿತು.

Share this article