ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ: ಕೈತಪ್ಪಿದ 2000 ಕೋಟಿ ಹೂಡಿಕೆ

KannadaprabhaNewsNetwork |  
Published : Jun 28, 2024, 12:47 AM IST
14456 | Kannada Prabha

ಸಾರಾಂಶ

ಏಥರ್ ಎನರ್ಜಿ ಕಂಪನಿ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ಹೂಡಿಕೆ ಮಾಡಿ 4,000 ಮಂದಿಗೆ ಉದ್ಯೋಗ ಕಲ್ಪಿಸಲು ಆಸಕ್ತಿ ತೋರಿಸಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ಪಂದಿಸದ ಕಾರಣ ಆ ಕಂಪನಿ ಈಗ ತನ್ನ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸುತ್ತಿದೆ.

ಹುಬ್ಬಳ್ಳಿ:

ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ ದೇಶದ ಅತಿ ದೊಡ್ಡ ನೆಟ್ವರ್ಕ್ ಸಂಸ್ಥೆ ಏಥರ್ ಎನರ್ಜಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿದು ಮಹಾರಾಷ್ಟ್ರಕ್ಕೆ ಹೋಗಿದೆ. ಇದರಿಂದ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ಏಥರ್ ಎನರ್ಜಿ ಕಂಪನಿ ರಾಜ್ಯದಲ್ಲಿ ಸುಮಾರು ₹ 2 ಸಾವಿರ ಕೋಟಿ ಹೂಡಿಕೆ ಮಾಡಿ 4,000 ಮಂದಿಗೆ ಉದ್ಯೋಗ ಕಲ್ಪಿಸಲು ಆಸಕ್ತಿ ತೋರಿಸಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ಪಂದಿಸದ ಕಾರಣ ಆ ಕಂಪನಿ ಈಗ ತನ್ನ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸುತ್ತಿದೆ. ಇದರಿಂದಾಗಿ 4 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ತಪ್ಪಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿಪುಲ ಅವಕಾಶಗಳಿದ್ದರೂ ಸರ್ಕಾರ ಕಂಪನಿ ಜತೆ ಮಾತುಕತೆ ನಡೆಸಿ ಹೂಡಿಕೆಗೆ ಕಂಪನಿಯ ಮನವೊಲಿಸುವಲ್ಲಿ ವಿಫಲವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯು ಕರ್ನಾಟಕದ ಬದಲು ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಬಂಡವಾಳ ಹೂಡಿಕೆ ವಿಚಾರದಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಹೂಡಿಕೆದಾರರ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಪನಿ ಜತೆ ಮಾತುಕತೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದಾರೆ.

ಸರ್ಕಾರ ಇನ್ನು ಮುಂದಾದರೂ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಕಂಪನಿಗಳನ್ನು ಆಕರ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಏಥರ್ ಎನರ್ಜಿಯಂತೆ ಇತರೆ ಕಂಪನಿಗಳು ರಾಜ್ಯದಿಂದ ಹಿಂದೆ ಸರಿಯುವ ಪರಿಸ್ಥಿತಿ ಎದುರಾಗಬಹುದು. ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಕ್ಕೆ ಹೂಡಿಕೆ ಮಾಡಲು ಮುಂದಾಗುವ ಕಂಪನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ಸೆಳೆಯುತ್ತಿದ್ದಾರೆ ಎನ್ನುವ ಆರೋಪ ಮಾಡುವ ಕಾಂಗ್ರೆಸ್ ನಾಯಕರು ಮೊದಲು ತಮಗೆ ಸಿಕ್ಕ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಲಲು ಮುಂದಾಬೇಕು ಎಂದು ಟೀಕಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ