ವಿಜಯನಗರ ಸಾಮ್ರಾಜ್ಯದ ಆಡಳಿತದಿಂದ ಪ್ರಭಾವಿತರಾಗಿದ್ದ ಕೆಂಪೇಗೌಡ

KannadaprabhaNewsNetwork |  
Published : Jun 28, 2024, 12:47 AM IST
27ಎಚ್‌ಪಿಟಿ4- ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲಾಡಳಿತದಿಂದ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಜಿಪಂ ಸಿಇಒ ಸದಾಶಿವಪ್ರಭು ಅವರು ಪುಷ್ಪ ನಮನ ಸಲ್ಲಿಸಿದರು. | Kannada Prabha

ಸಾರಾಂಶ

ಕೆಂಪೇಗೌಡ ಅಂದಿನ ಕಾಲದಲ್ಲಿಯೇ ನೀರಿನ ಹಾಗೂ ಮಣ್ಣಿನ ಮಹತ್ವ ತಿಳಿದಿದ್ದರು. ವೈಜ್ಞಾನಿಕವಾಗಿ ಅನೇಕ ಕೆರೆ, ಕಟ್ಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಆಡಳಿತದಿಂದ ಪ್ರಭಾವಿತರಾಗಿದ್ದ ನಾಡಪ್ರಭು ಕೆಂಪೇಗೌಡರ ಆಡಳಿತವು ಇಂದಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕೆಂಪೇಗೌಡ ಅಂದಿನ ಕಾಲದಲ್ಲಿಯೇ ನೀರಿನ ಹಾಗೂ ಮಣ್ಣಿನ ಮಹತ್ವ ತಿಳಿದಿದ್ದರು. ವೈಜ್ಞಾನಿಕವಾಗಿ ಅನೇಕ ಕೆರೆ, ಕಟ್ಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಕೊಡುಗೆ ನಮ್ಮ ನಾಡಿಗೆ ಅಪಾರವಾಗಿದೆ ಎಂದರು.

ಜಿಪಂ ಸಿಇಒ ಸದಾಶಿವ ಪ್ರಭು ಬಿ. ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ ಎನಿಸಿಕೊಂಡವರು. ನೀರಿನ ಮಹತ್ವ ಅರಿತು ದಾಖಲೆ ರೀತಿಯಲ್ಲಿ ಕೆರೆಗಳನ್ನು ನಿರ್ಮಿಸಿ ಸಾಧನೆ ತೋರಿದ್ದಾರೆ. ಅವರ ಆಡಳಿತ, ಸಾಧನೆ ನಮಗೆ ಸದಾಕಾಲ ಸ್ಫೂರ್ತಿದಾಯಕ. ಅವರು ಸಾಧಿಸಿದ ಕೆಲಸಗಳು ಇತರರಿಗೆ ಮಾದರಿಯಾಗಿವೆ ಎಂದರು.

ವಿಜಯನಗರ ಕಾಲೇಜ್‌ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಎಚ್.ಎಂ. ಚಂದ್ರಶೇಖರ ಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿ, ಇತಿಹಾಸದ ಪುಟಗಳಲ್ಲಿ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಒಬ್ಬ ರಾಜನ ಯಶಸ್ಸು ಸಿದ್ಧಾಂತದ ಬದಲು ಕಾರ್ಯಾನುಷ್ಠಾನಗೊಳಿಸುವುದರಲ್ಲಿ ಇರುತ್ತದೆ. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ದಸರಾ ಉತ್ಸವ ನೋಡಲು ಕೆಂಪೇಗೌಡರು ಚಿಕ್ಕವಯಸ್ಸಿನಲ್ಲಿ ತಂದೆಯ ಜೊತೆಗೆ ಬರುತ್ತಿದ್ದರು. ನಿರ್ದಿಷ್ಟ ನಗರ ಯೋಜನೆಯ ಜ್ಞಾನ ಹೊಂದಿದ್ದರು. ಕೃಷಿ, ನೀರಾವರಿಗಾಗಿ ಹೆಚ್ಚಿನ ಕೆರೆ ಕಾಲುವೆಗಳನ್ನು ನಿರ್ಮಿಸಿದ್ದಾರೆ. ಅವರು ತೆಲುಗು ಭಾಷೆಯಲ್ಲಿ ಸಹ ಪರಿಣತಿ ಹೊಂದಿದ್ದರು ಎಂದು ಹೇಳಿದರು.

ಹೊಸಪೇಟೆ ತಹಸೀಲ್ದಾರ ವಿಶ್ವಜಿತ್ ಮೆಹತಾ, ತಾಪಂ ಇಒ ಹರೀಶ್, ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಯಲಿಗಾರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ಹವಾಲ್ದಾರ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಇದ್ದರು.

ನಾಡಪ್ರಭು ಕೆಂಪೇಗೌಡರ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೊಸಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಚಿತ್ತವಾಡಿಗಿಯ ಎಚ್.ಕೆ. ವಿದ್ಯಾಪ್ರಿಯಾ ಹಾಗೂ ದ್ವಿತೀಯ ಸ್ಥಾನ ಪಡೆದ ಹೊಸಪೇಟೆ ಚಾರಿಟೇಬಲ್ ಪ್ರೌಢಶಾಲೆಯ ವಂದನಾ ಮತ್ತು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೊಸಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಚಿತ್ತವಾಡಿಗಿಯ ಶಾಂಭವಿ ಹಾಗೂ ದ್ವಿತೀಯ ಸ್ಥಾನ ಪಡೆದ ಹೊಸಪೇಟೆಯ ನ್ಯಾಷನಲ್ (ಆಂಗ್ಲ ಮಾಧ್ಯಮ) ಪ್ರೌಢಶಾಲೆಯ ಗುಜ್ಜಲ್ ಹಂಸ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ