ಮತದಾನಕ್ಕೆ ನಿರ್ಲಕ್ಷ್ಯ ಸಂವಿಧಾನದ ಅಗೌರವ: ನ್ಯಾ. ಮಲ್ಲಿಕಾರ್ಜುನ ಸ್ವಾಮಿ

KannadaprabhaNewsNetwork | Published : Jan 26, 2025 1:30 AM

ಸಾರಾಂಶ

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಯುವ ಮತದಾರರಿಗೆ ಮತದಾರರ ಚೀಟಿ ವಿತರಿಸಲಾಯಿತು. ಕಳೆದ ಚುನಾವಣೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಒಂದು ಹಬ್ಬವಾಗಿದ್ದು, ಮತದಾನದಲ್ಲಿ ಭಾಗವಹಿಸುವುದು ನಮ್ಮ ಆದ್ಯ ಕರ್ತವ್ಯ. ಮತದಾನ ಮಾಡಲು ನಿರ್ಲಕ್ಷ್ಯ, ಅಸಡ್ಡೆ ವಹಿಸುವುದು ಸಂವಿಧಾನಕ್ಕೆ ಮಾಡುವ ಅಗೌರವ ಎಂದು ತಿಳಿಯಬೇಕಾಗುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಎಚ್‌.ಎಸ್‌. ಅಭಿಪ್ರಾಯಿಸಿದ್ದಾರೆ.ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಶನಿವಾರ ನಡೆದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಂಕಿ ಅಂಶಗಳ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 98 ಕೋಟಿ ಮತದಾರರು ಅರ್ಹತೆ ಪಡೆದಿದ್ದು, ಇದೀಗ ಮತದಾರರ ಸಂಖ್ಯೆ 100 ಕೋಟಿ ದಾಟಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಸಂಖ್ಯೆ 66 ಕೋಟಿ ಮಾತ್ರ. ಇದರಲ್ಲಿ ಅಂದಾಜು ಮೂರು ಕೋಟಿಯಷ್ಟು ಮಂದಿ ಅನಿವಾರ್ಯ ಕಾರಣಗಳಿಂದ ಮತದಾನದಲ್ಲಿ ಭಾಗವಹಿಸಿಲ್ಲ. ಉಳಿದ ಸುಮಾರು 30 ಕೋಟಿ ಮಂದಿ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲಾಗಿರುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆಂದೇ ಭಾವಿಸಬೇಕಾಗುತ್ತದೆ ಎಂದರು.ಶೇ.90 ಮತದಾನಕ್ಕೆ ಯತ್ನಿಸಿ:

ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಶೇ. 77ರಷ್ಟು ಮತದಾನವಾಗಿರುವುದು ಇಲ್ಲಿನ ಜಿಲ್ಲಾಡಳಿತದ ಸಾಧನೆ. ಮುಂದಿನ ಪ್ರತಿಯೊಂದು ಚುನಾವಣೆಗಳಲ್ಲಿಯೂ ಶೇ. 90 ಮತದಾನವಾಗುವುದನ್ನು ಯುವ ಜನತೆ ಖಾತರಿಪಡಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸುವ ಜತೆಗೆ ತಮ್ಮ ಸ್ನೇಹಿತಕರು, ಮನೆಯವರು ಹಾಗೂ ನೆರೆಹೊರೆಯವರನ್ನು ಮತದಾನಕ್ಕೆ ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅಧ್ಯಕ್ಷತೆ ವಹಿಸಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತದಾನ ಶೇ. 66.65. ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಹಾಗೂ ನಮ್ಮ ನಿತ್ಯದ ಬದುಕಿನಲ್ಲಿ ಉತ್ತಮ ಜನಪ್ರತಿನಿಧಿಗಳ ಆಯ್ಕೆಯಿಂದಾಗುವ ಅಂಶಗಳನ್ನು ಅರಿತು ನಮ್ಮ ಜವಾಬ್ದಾರಿಯುತ ನಾಗರಿಕರಾಗಿ ಹಕ್ಕನ್ನು ನಾವು ಚಲಾಯಿಸಬೇಕು ಎಂದರು.

ಜಿ.ಪಂ. ಸಿಇಒ ಡಾ. ಆನಂದ್‌ ಅವರು ಮತದಾನ ಕುರಿತಂತೆ ಪ್ರತಿಜ್ಞೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಯುವ ಮತದಾರರಿಗೆ ಮತದಾರರ ಚೀಟಿ ವಿತರಿಸಲಾಯಿತು. ಕಳೆದ ಚುನಾವಣೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್‌ ಕುಮಾರ್‌, ವಾರ್ತಾಧಿಕಾರಿ ಖಾದರ್‌ ಷಾ ಇದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

ಯಾಕಾಗಿ ಮತದಾರರ ದಿನಾಚರಣೆ? ಭಾರತದ ಸಂವಿಧಾನದಲ್ಲಿ ಅಂಗೀಕರಿಸಿದಂತೆ ಸ್ವತಂತ್ರ ಸಂವಿಧಾನಿಕ ಚುನಾವಣಾ ಸಂಸ್ಥೆಯನ್ನು ರಚಿಸಿಕೊಂಡು 2011ರ ವರೆಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವ ಅಗತ್ಯ ದೇಶದಲ್ಲಿರಲಿಲ್ಲ. ಆದರೆ 2011ರ ಬಳಿಕ ದೇಶದಲ್ಲಿ ಶಿಕ್ಷಿತರು ಜಾಸ್ತಿಯಂತೆ, ಪ್ರಜ್ಞಾವಂತಿಕೆ ಕಡಿಮೆಯಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಮತದಾನವಾದರೂ ಅಧಿಕ ಶಿಕ್ಷಿತರಿರುವ ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣೆಯ ನಿಟ್ಟಿನಲ್ಲಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿವೆ. ಇದರ ಹೊರತೂ ಮತಗಟ್ಟೆಗಳು ಅಣತಿ ದೂರದಲ್ಲಿದ್ದರೂ ಪ್ರಜಾತಂತ್ರದಲ್ಲಿ ಭಾಗವಹಿಸಲು ಶಿಕ್ಷಿತ ವರ್ಗವೇ ಹಿಂದೇಟು ಹಾಕುತ್ತಿದ್ದುದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ನ್ಯಾಯಾಧೀಶ ಮಲ್ಲಿಕಾರ್ಜುನ್‌ ಹೇಳಿದರು.

---------------

Share this article