ಡೆಂಘೀ ಪ್ರಕರಣ ಹೆಚ್ಚುತ್ತಿದ್ದರೂ ನಿರ್ಲಕ್ಷ್ಯ, ಶಿಸ್ತು ಕ್ರಮದ ಎಚ್ಚರಿಕೆ

KannadaprabhaNewsNetwork | Published : Jun 16, 2024 1:45 AM

ಸಾರಾಂಶ

ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದರೂ ಗ್ರಾಮ ಪಂಚಾಯಿತಿಗಳು ಫಾಗಿಂಗ್ ನಿರ್ಲಕ್ಷಿಸುತ್ತಿವೆ, ಅಂಗನವಾಡಿಗಳಲ್ಲಿ ಮೊಟ್ಟೆ ಹಾಗೂ ಹಾಲಿನ ಪೌಡರ್ ಮಾರಿಕೊಳ್ಳುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.

ಹಾನಗಲ್ಲ: ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದರೂ ಗ್ರಾಮ ಪಂಚಾಯಿತಿಗಳು ಫಾಗಿಂಗ್ ನಿರ್ಲಕ್ಷಿಸುತ್ತಿವೆ, ಅಂಗನವಾಡಿಗಳಲ್ಲಿ ಮೊಟ್ಟೆ ಹಾಗೂ ಹಾಲಿನ ಪೌಡರ್ ಮಾರಿಕೊಳ್ಳುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜೆಜೆಎಂ ಕಾಮಗಾರಿ ಕಳಪೆಯಾಗಿದೆ, ರಸಗೊಬ್ಬರ ಮಾರಾಟಗಾರರು ರೈತರಿಗೆ ಬಿಲ್ ಕೊಡುತ್ತಿಲ್ಲ, ಟ್ರೀ ಪಾರ್ಕ್‌ ನಿರ್ವಹಣಾ ದೋಷದಿಂದ ಕೂಡಿದೆ, ಎಳವಟ್ಟಿ ಪ್ರಾಥಮಿಕ ಶಾಲೆ ಕಟ್ಟಡ ಜಾಡು ಕಟ್ಟಿದ್ದರೂ ಇಲಾಖೆ ನಿರ್ಲಕ್ಷಿಸಿದೆ ಎಂಬ ದೂರುಗಳು ಶಾಸಕ ಶ್ರೀನಿವಾಸ ಮಾನೆ ಅವರ ಸಮ್ಮುಖದಲ್ಲೇ ಚರ್ಚೆಗೆ ಬಂದವು.ಶನಿವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಗಳು ವರದಿ ನೀಡುವ ಸಂದರ್ಭದಲ್ಲಿ ಡೆಂಘೀ ಪ್ರಕರಣಗಳ ಬಗೆಗೆ ನಿರ್ಲಕ್ಷ್ಯ ತೋರುತ್ತಿರುವ, ಫಾಗಿಂಗ್ ಮಾಡದೇ ಇರುವ, ಸ್ವಚ್ಛತೆಗೆ ಗಮನ ಕೊಡದ ಗ್ರಾಮ ಪಂಚಾಯಿತಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು. ಬೆಳೆವಿಮೆ ಬರ ಪರಿಹಾರದ ಹಣವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮಾ ಮಾಡುವುದನ್ನು ಉದಾಹರಣೆ ಸಹಿತ ತಿಳಿಸಿ, ಇದು ಸರಿ ಅಲ್ಲ ಕೂಡಲೆ ಇದನ್ನು ನಿಲ್ಲಿಸಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ೩ ವಿದ್ಯುತ್ ಗ್ರಿಡ್‌ಗಳನ್ನು ೩೦ ಕೆವಿ ಇಂದ ೧೧೦ ಕೆವಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಆದರೆ ಹೆಸ್ಕಾಂ ಅಧಿಕಾರಿಗಳು ಜನರ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಆಕ್ರಮ ಸಕ್ರಮ ಕಾಮಗಾರಿಯು ಆಮೆಗತಿಯಲ್ಲಿದೆ. ಬೀದಿ ದೀಪ ಸ್ಕೀಂ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಎಚ್ಚರಿಸಿದರು. ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಿದಿರಿ, ಆದರೆ ಅವರಿಗೆ ಹಣ ಪಾವತಿ ಆಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಇವುಗಳ ನಿರ್ವಹಣೆ ತೀರ ಅವೈಜ್ಞಾನಿಕವಾಗಿದೆ. ಕೊಳವೆ ಬಾವಿ ಕೊರೆದವರಿಗೆ ೨.೬೩ ಕೋಟಿ ರು. ಹಣ ಕೊಡುವುದು ಬಾಕಿ ಇದೆ. ನೀರಿಲ್ಲದ ಕೊಳವೆ ಬಾವಿಗಳಿಗೆ ಜಲಜೀವನ ಮಿಶನ್ ಪೈಪ್‌ಲೈನ್ ಜೋಡಣೆ ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ರಸಗೊಬ್ಬರ ವಿತರಣೆ ಸಂದರ್ಭದಲ್ಲಿ ಪಾವತಿ ನೀಡುತ್ತಿಲ್ಲ. ದರ ಪಟ್ಟಿ ಹಾಕಿಲ್ಲ. ಹೆಚ್ಚು ಬೆಲೆಗೆ ಮಾರಾಟವು ನಡೆದಿದೆ ಎಂಬ ಸಂಗತಿ ಬೆಳಕಿಗೆ ಬಂದವು. ಯಳವಟ್ಟಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಕಂಟಿ ಬೆಳೆದಿವೆ. ಜಾಡು ಕಟ್ಟಿದೆ. ಹಾವು ಹುಳು ಓಡಾತ್ತಿವೆ ಎಂಬ ದೂರುಗಳಿವೆ. ಕೂಡಲೆ ಇಂತಹ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಗ್ರಾಮಗಳಲ್ಲಿ ಶಾಲೆಗಳ ಮೈದಾನ ಹಾಗೂ ಅದರ ಸಮೀಪ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲೀಜು ಮಾಡಿದ ದೂರುಗಳಿವೆ. ಇಂತಹವರ ಮೇಲೆ ಅಬಕಾರಿ ಇಲಾಖೆ ಗಮನಿಸಿ ಕೂಡಲೇ ಕ್ರಮ ಜರುಗಿಸಬೇಕು. ಎಗ್ ರೈಸ ಅಂಗಡಿಗಳಲ್ಲಿ ಮದ್ಯಪಾನ ಮಾಡುತ್ತಿರುವ ದೂರುಗಳಿವೆ. ಇಂಥಹವನ್ನು ಕೂಡಲೇ ನಿಲ್ಲಿಸಲು ಕ್ರಮ ಜರುಗಿಸುವಂತೆ ಅಬಕಾರಿ ಅಧಿಕಾರಿಗೆ ಶಾಸಕರು ಸೂಚಿಸಿದರು.ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ನೋಂದಣಿ ಬಂದಾಗಿದೆ. ಕೊಳಗೇರಿ ವಾಸಿಗಳಿಗೆ ಮನೆ ನಿರ್ಮಾಣದಲ್ಲಿ ಅವ್ಯವಹಾರ ನಡೆದ ದೂರುಗಳಿವೆ. ಅರಣ್ಯ ಇಲಾಖೆ ನಿರ್ವಹಿಸುವ ಟ್ರೀಪಾರ್ಕ್‌ ನಿರ್ವಹಣೆ ಸಂಪೂರ್ಣವಾಗಿ ನಿರ್ಲಕ್ಷಕ್ಕೊಳಗಾಗಿದೆ. ಅಂಗನವಾಡಿ ಕಾರ್ಯಕರ್ತರ ಕೊರತೆ, ಕಟ್ಟಡ ಮರು ನಿರ್ಮಾಣ, ವರದಾ ನದಿಗೆ ಮಳೆ ನೀರು ಬಂದ ತಕ್ಷಣ ತಿಳವಳ್ಳಿ ಹಾಗೂ ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ಆರಂಭವಾಗುತ್ತದೆ ಎಂಬ ವಿಷಯಗಳು ಚರ್ಚೆಗೆ ಬಂದವು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ದೇವರಾಜ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹನುಮಂತಪ್ಪ ಗೊಂದಿ, ತಾಪಂ ನಾಮ ನಿರ್ದೇಶಿತ ಸದಸ್ಯರಾದ ಮಾರ್ತಾಂಡಪ್ಪ ಮಣ್ಣಮ್ಮನವರ, ರಾಜೇಶ ಚಹ್ವಾಣ, ಪ್ರಕಾಶ ಈಳಿಗೇರ, ರಾಜಕುಮಾರ ಜೋಗಪ್ಪನವರ, ಅನಿತಾ ಡಿಸೋಜಾ, ಮಹಮ್ಮದಹನಿಫ ಬಂಕಾಪೂರ ವೇದಿಕೆಯಲ್ಲಿದ್ದರು.

Share this article