ಸಂಧಾನ ವಿಫಲ, ಎರಡನೇ ದಿನಕ್ಕೆ ಮುಂದುವರೆದ ಧರಣಿ

KannadaprabhaNewsNetwork | Published : Mar 14, 2024 2:00 AM

ಸಾರಾಂಶ

ಕೆಲ ಪಟ್ಟಭದ್ರ ಹಿತಾಸಕ್ತಿಗಳ ಜತೆಗೂಡಿ ೨೦ ರಿಂದ ೩೦ ಕೊಟ್ಟಿ ಹಾಜರಿ ಹಾಕಿ ಕೆಲಸ ನಡೆಸಿ ಸರ್ಕಾರದ ಹಣ ದೂರುಪಯೋಗ

ಗಜೇಂದ್ರಗಡ: ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಸಮೀಪದ ಲಕ್ಕಲಕಟ್ಟಿ ಗ್ರಾಪಂ ಎದುರು ನಡೆಸುತ್ತಿದ್ದ ಹೋರಾಟವನ್ನು ಮೊಟಕುಗೊಳಿಸುವಂತೆ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಹೋರಾಟ ಮುದುವರೆದ ಘಟನೆ ಬುಧವಾರ ನಡೆದಿದೆ.

ಸರ್ಕಾರದ ಯೋಜನೆಗಳ ಲಾಭ ಗ್ರಾಮೀಣ ಭಾಗದ ಜನರಿಗೆ ತಲುಪಲಿ ಎಂದು ಜಾರಿಗೆ ತಂದಿರುವ ಗ್ರಾಮ ಸಭೆ, ಉದ್ಯೋಗ ಖಾತ್ರಿ ಯೋಜನೆಗಳನ್ನು ಸಮರ್ಪಕವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಗೆ ಮಾಡುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳ ಮಾಹಿತಿ ಜತೆಗೆ ಲಾಭ ಪಡೆಯಬೇಕಾದ ಜನತೆ ಪಂಚಾಯ್ತಿಗೆ ಹಿಡಿಶಾಪ ಹಾಕುವುದರ ಜತೆಗೆ ನ್ಯಾಯಕ್ಕಾಗಿ ಇಂದು ಗ್ರಾಪಂ ಎದುರು ಹೋರಾಟ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ. ಲಕ್ಕಲಕಟ್ಟಿ ಗ್ರಾಪಂ ವ್ಯಾಪ್ತಿಯ ಕಲ್ಲಿಗನೂರ, ನಾಗೇಂದ್ರಗಡ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಪಿಡಿಒ ಸರಿಯಾಗಿ ಕರ್ತವ್ಯದಲ್ಲಿ ಇರುವದಿಲ್ಲ. ಪರಿಣಾಮ ಕಳೆದ ೨ ವರ್ಷಗಳಿಂದ ಗ್ರಾಮ ಸಭೆ ನಡೆದಿಲ್ಲ. ೨೦೨೩-೨೪ನೇ ಸಾಲಿನಲ್ಲಿ ಕೇವಲ ೯ ದಿನಗಳ ಕಾಲ ಉದ್ಯೋಗ ಖಾತ್ರಿ ಅಡಿ ಕೆಲಸ ನೀಡಿದ್ದಾರೆ. ಅಲ್ಲದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಜತೆಗೂಡಿ ೨೦ ರಿಂದ ೩೦ ಕೊಟ್ಟಿ ಹಾಜರಿ ಹಾಕಿ ಕೆಲಸ ನಡೆಸಿ ಸರ್ಕಾರದ ಹಣ ದೂರುಪಯೋಗ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಪ್ರತಿಭಟನಾಕಾರರು, ರೈತ ಸಮೂಹಕ್ಕೆ ಸಹಾಯಕ ಕಾಮಗಾರಿಗಳಾದ ಕೃಷಿಹೊಂಡ, ದನದ ಕೊಟ್ಟಿಗೆ ನಿರ್ಮಾಣದ ಬಿಲ್‌ಗಳನ್ನು ಮಾಡಲು ಗ್ರಾಪಂನಲ್ಲಿ ಹಿಂದೇಟು ಹಾಕಲಾಗುತ್ತಿದೆ. ಹೀಗಾಗಿ ಗ್ರಾಪಂನಲ್ಲಿನ ಭ್ರಷ್ಟಾಚಾರ ತನಿಖೆ ಜತೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಾಪಂ ಎಡಿ(ಪಂಚಾಯತ್ ರಾಜ್) ಬಸವರಾಜ ಬಡಿಗೇರ ಅಧಿಕಾರಿ ವಿವಿಧ ಬೇಡಿಕೆಗಳ ಈಡೇರಿಕೆ ಜತೆಗೆ ಅಧಿಕಾರಿಗಳನ್ನು ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಅಹವಾಲು ಆಲಿಸಿದ ಬಳಿಕ ೧೦-೧೫ ದಿನಗಳ ಕಾಲಾವಕಾಶ ನೀಡಲು ಮನವಿ ಮಾಡಿದರು. ಆದರೆ ಪ್ರತಿಭಟನಾಕಾರರು ನಾವು ಕಳೆದ ಕೆಲ ತಿಂಗಳಿನಿಂದ ಸಮಸ್ಯೆ ಪರಿಹಾರ ಒದಗಿಸುವಂತೆ ಈ ಹಿಂದೆ ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸುವದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ತಾಪಂ ಅಧಿಕಾರಿ ನಡೆಸಿದ ಸಂಧಾನ ವಿಫಲವಾಯಿತು. ಪರಿಣಾಮ ನಾಳೆ ಮಧ್ಯಾಹ್ನದೊಳಗೆ ಬೇಡಿಕೆ ಈಡೇರಿದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಮುಖಂಡರಾದ ಶರಣಪ್ಪ ಹೊಸಳ್ಳಿ, ಮಲ್ಲು ಕೊಪ್ಪದ, ಅಳೆಬಸಪ್ಪ ಬೆನಕವಾರಿ, ಶಿವ ಶಿರೂರ, ಬಸವರಾಜ ಕೊಪ್ಪದ, ಪರಮೇಶ ಬೂದಿಹಾಳ, ಮುತ್ತಣ್ಣ ಅಕ್ಕರಗಲ್ಲ, ಮಲ್ಲು ಆಡೂರ, ಸೇರಿ ಇತರರು ಇದ್ದರು.

Share this article