ಹೊಸಪೇಟೆ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಂಗಲ್ ರಾಜ್ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದ್ದು, ಹುಬ್ಬಳ್ಳಿಯ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಸಿಎಂ, ಡಿಸಿಎಂ, ಗೃಹಮಂತ್ರಿ ಸುಮ್ಮನಾಗಿದ್ದಾರೆ. ರಾಜ್ಯಪಾಲರ ಬಳಿಯೂ ಬಿಜೆಪಿ ನಿಯೋಗ ತೆರಳಲಿದೆ. ಅಮಾಯಕ ವಿದ್ಯಾರ್ಥಿನಿಯ ಕೊಲೆಯಾಗಿದೆ. ಈ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ. ನೇಹಾ ಹಾಗೂ ಅವರ ಕುಟುಂಬಕ್ಕೂ ನ್ಯಾಯ ದೊರೆಯಬೇಕು. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ಮೋದಿ ಸರ್ಕಾರದ ವಿರುದ್ಧ ಚೊಂಬಿನ ಜಾಹೀರಾತು ನೀಡುತ್ತಿದೆ. ಜೂ. 4ರ ಬಳಿಕ ಇದಕ್ಕೆ ಸ್ಪಷ್ಟ ಉತ್ತರ ದೊರೆಯಲಿದೆ. ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿದವರನ್ನು ಪ್ರಶ್ನಿಸಿ, ದೌರ್ಜನ್ಯವೆಸಗಲಾಗಿದೆ. ಮೈಸೂರಿನಲ್ಲೂ ಇಂತಹದೇ ಪ್ರಕರಣ ನಡೆದಿದೆ. ನಟಿ ಹರ್ಷಿಕಾ ಪೂಣಚ್ಚ ಮೇಲೂ ದೌರ್ಜನ್ಯ ನಡೆದಿದೆ. ಇಂತ ಕುಕೃತ್ಯಗಳನ್ನು ರಾಜ್ಯ ಸರ್ಕಾರ ತಡೆಯಬೇಕು ಎಂದರು.
ಮುಖಂಡರಾದ ಸಿದ್ದಾರ್ಥ ಸಿಂಗ್, ಬಂಗಾರು ಹನುಮಂತ, ಬಲ್ಲಾಹುಣ್ಸಿ ರಾಮಣ್ಣ, ಓದೋ ಗಂಗಪ್ಪ, ಕೃಷ್ಣ ನಾಯ್ಕ, ಶಂಕರ ಮೇಟಿ, ಸಂದೀಪ್ ಸಿಂಗ್, ಬಸವರಾಜ, ಕಿಚಿಡಿ ಕೊಟ್ರೇಶ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಆರುಂಡಿ ಸುವರ್ಣ, ಉಪಾಧ್ಯಕ್ಷೆ ರೇಖಾ ರಾಣಿ, ಪ್ರಿಯಾಂಕಾ ಜೈನ್, ಕವಿತಾ, ಉಮಾ, ಭಾರತಿ ಪಾಟೀಲ್, ಅನುರಾಧಾ ಮತ್ತಿತರರಿದ್ದರು. ತಹಸೀಲ್ದಾರ್ ಶ್ರುತಿಗೆ ಮನವಿ ರವಾನಿಸಲಾಯಿತು.