ನೆಹರೂ ಅಂದೇ ಸಂವಿಧಾನ ವಿರೋಧಿಸಿದ್ದರು: ಡಿ.ಎನ್‌.ಜೀವರಾಜ್‌ ಆರೋಪ

KannadaprabhaNewsNetwork | Published : Sep 14, 2024 1:52 AM

ಸಾರಾಂಶ

ನರಸಿಂಹರಾಜಪುರ, ಜವಾಹರಲಾಲ್ ನೆಹರು ಅವರು ಆಗಿನ ಕಾಲದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿನ ಮೀಸಲಾತಿ ಯನ್ನು ವಿರೋಧಿಸಿದ್ದರು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.

- ಅಂಬೇಡ್ಕರ್‌ ವೃತ್ತದಲ್ಲಿ ತಾಲೂಕು ಬಿಜೆಪಿಯಿಂದ ಪ್ರತಿಭಟನಾ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜವಾಹರಲಾಲ್ ನೆಹರು ಅವರು ಆಗಿನ ಕಾಲದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿನ ಮೀಸಲಾತಿ ಯನ್ನು ವಿರೋಧಿಸಿದ್ದರು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.

ಪಟ್ಟಣದ ವಾಟರ್ ಟ್ಯಾಂಕ್ ವೃತ್ತದಲ್ಲಿ ಗುರುವಾರ ರಾತ್ರಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಅಂದು ನೆಹರು ಮೀಸಲಾತಿ ವಿರೊಧಿಸಿದ್ದರು. ಇಂದು ಅವರ ವಂಶದ ಕುಡಿಯಾದ ರಾಹುಲ್‌ ಗಾಂಧಿಯವರೂ ಮೀಸಲಾತಿ ವಿರೋಧಿಸುತ್ತಿದ್ದಾರೆ. ದೇಶದ ಬಗ್ಗೆ ಗೌರವ ಇಲ್ಲದೆ, ವಿದೇಶದಲ್ಲಿ ಅಗೌರವಾಗಿ ಮಾತನಾಡುವ ರಾಹುಲ್ ಗಾಂಧಿಗೆ ದಲಿತರ, ಶೋಷಿತರ ಬಗ್ಗೆ ಕಾಳಜಿ ಇಲ್ಲ. ಅವರು ಭಾರತದಲ್ಲಿ ನಿರುದ್ಯೋಗವಿದೆ, ಭಾರತದ ಸಂವಿಧಾನದಲ್ಲಿರುವ ಮೀಸಲಾತಿ ತೆಗೆಯಬೇಕೆಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೇವಲ ವೋಟ್ ಬ್ಯಾಂಕಿಂಗ್‌ಗಾಗಿ ಕೇವಲ ಒಂದು ವರ್ಗದ ಜನರನ್ನು ಓಲೈಸಿಕೊಳ್ಳುವ ಬುದ್ಧಿ ಹೊಂದಿದೆ. ಹಿಂದೂಗಳು, ಎಸ್.ಸಿ. ಎಸ್ಟಿಯವರ ವಿರುದ್ಧವಾಗಿ ಕಾಂಗ್ರೆಸ್ ನಡೆದು ಕೊಳ್ಳುತ್ತಿದೆ. ರಾಹುಲ್ ಗಾಂಧಿ ಮೀಸಲಾತಿಯನ್ನು ತೆಗೆಯಬೇಕೆಂಬ ಹೇಳಿಕೆಯನ್ನು ನೀಡಿದ್ದರಿಂದ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ, ರಾಹುಲ್‌ ಗಾಂದಿರ ಈ ಹೇಳಿಕೆ ಕಾಂಗ್ರೆಸ್ ನ ಇನ್ನೊಂದು ಮುಖ ತೋರಿಸಿಕೊಟ್ಟಿದೆ. ಸಂವಿಧಾನದಲ್ಲಿರುವ ಮೀಸಲಾತಿ ದಲಿತರ ಹಕ್ಕಾಗಿದೆಯೇ ಹೊರತು, ಕಾಂಗ್ರೆಸ್ ಪಕ್ಷದ ಭಿಕ್ಷೆಯಲ್ಲ. ಮೀಸಲಾತಿ ವಿರೋಧಿ ಹೇಳಿಕೆ ನೀಡಿದ ರಾಹುಲ್‌ಗಾಂಧಿ ಕ್ಷಮೆಯಾಚಿಸಬೇಕು. ಪವಿತ್ರವಾದ ಸಂವಿಧಾನವನ್ನು ದೇಶಕ್ಕೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡದೆ ಅವರ ಹುಟ್ಟೂರಿಗೆ ಕಳುಹಿಸಿದ್ದು ಕಾಂಗ್ರೆಸ್‌ ಪಕ್ಷವೇ ಎಂದು ದೂರಿದರು.

ಎಸ್.ಸಿ. ಎಸ್ಟಿ ಇಲಾಖೆಯ 177 ಕೋಟಿ ಅನುದಾನವನ್ನು ಲೂಟಿ ಹೊಡೆದದ್ದು ಕಾಂಗ್ರೆಸ್, ಮೂಡಾ ಹಗರಣ ಮಾಡಿದ್ದು ಕಾಂಗ್ರೆಸ್, ಇಂತಹ ಕಾಂಗ್ರೆಸ್ ಪಕ್ಷದವರಿಂದ ದೇಶ ಏನು ಬಯಸಲಾಗುತ್ತದೆ. ರಾಹುಲ್‌ಗಾಂಧಿ ವಿದೇಶದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಮೂಲಕ ರಾಹುಲ್‌ ಗಾಂಧಿ ಅಪ್ರಬುದ್ಧ ನಾಯಕ ಎಂದು ಸಾಬೀತು ಮಾಡಿದ್ದಾರೆ ಎಂದರು.ಬಿಜೆಪಿ ಮುಖಂಡ ಬಿ.ಎಸ್.ಆಶಿಶ್‌ಕುಮಾರ್ ಮಾತನಾಡಿ, ಅಮೇರಿಕಾಕ್ಕೆ ಹೋಗಿ ಈ ದೇಶದ ಬಗ್ಗೆ ಅಗೌರವ ತೋರಿ ಬರುವ ರಾಹುಲ್‌ ಗಾಂಧಿ ಹಿಂದೂಗಳ, ದಲಿತರ ವಿರೋಧಿ ಎಂದು ಸಾಬೀತು ಮಾಡಿದ್ದಾರೆ. ಇಂತಹ ಬಾಲಿಶಃ ಹೇಳಿಕೆ ಗಳನ್ನು ನೀಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರಾದ ಎನ್.ಎಂ.ಕಾಂತರಾಜ್, ಕೆಸವೆ ಮಂಜುನಾಥ್, ಎ.ಬಿ.ಮಂಜುನಾಥ್, ಸುರಭಿ ರಾಜೇಂದ್ರ, ರಶ್ಮಿ ದಯಾನಂದ್, ರೀನಾಬೆನ್ನಿ, ಶೋಭಾ, ಎಚ್.ಡಿ.ಲೋಕೇಶ್, ಪ್ರೀತಂ, ಬೆಮ್ಮನೆ ಮೋಹನ, ಅಶ್ವನ್, ಎಚ್.ಇ.ದಿವಾಕರ, ಡಿ.ಆರ್.ಶ್ರೀನಾಥ್,ಕೈಮರ ವಿಜಯ ಮತ್ತಿತರರು ಉಪಸ್ಥಿತರಿದ್ದರು.

Share this article