ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಲಕ್ಷಾಂತರ ಯುವಕರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯದ ವಿಜಯೋತ್ಸವದ ಹಿಂದಿನ ದಿನ ನೆಹರು ಮತ್ತು ಜಿನ್ನಾ ಅವರ ಕುತಂತ್ರದಿಂದ ದೇಶ ವಿಭಜನೆಯಾಗಿ ಕರಾಳ ಇತಿಹಾಸಕ್ಕೆ ಸಾಕ್ಷಿಯಾಯಿತು ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಹೇಳಿದರು.ಇಲ್ಲಿನ ಬಿಜೆಪಿ ಮಂಡಲ ವತಿಯಿಂದ ನಡೆದ ತಿರಂಗಾ ಯಾತ್ರೆಯ ಬೈಕ್ ರ್‍ಯಾಲಿ ನಂತರ ಪಟ್ಟಣದ ಪೃಥ್ವಿ ಗಾರ್ಡನ್‌ದಲ್ಲಿ ನಡೆದ ವಿಭಜನೆ ವಿಭೀಷಣ ಸ್ಮೃತಿ ದಿವಸ ಸಭೆಯಲ್ಲಿ ಅವರು ಮಾತನಾಡಿದ ಅವರು, ದೇಶ ವಿಭಜನೆ ಒಂದೇ ದಿನ ಆಗಿಲ್ಲ. ಆಂಧ್ರ ಪ್ರದೇಶದ ಖಾಕಿ ನಾಡಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ದೇಶಭಕ್ತರನ್ನು ಒಂದುಗೂಡಿಸಿ ಒಂದೇ ಮಾತರಂ ಗೀತೆಗೆ ಕತ್ತರಿ ಹಾಕುವ ಮೂಲಕ ವಿಭಜನೆಗೆ ಬೀಜ ಬಿತ್ತಲಾಯಿತು. ದೇಶದ ಪ್ರಧಾನಿಯಾಗಬೇಕು ಇಲ್ಲವಾದರೆ ವಿಭಜನೆ ಆಗಬೇಕೆಂಬ ಜಿನ್ನಾ ಮಾಡಿದ ಕುತಂತ್ರಕ್ಕೆ ಅಂದಿನ ಕಾಂಗ್ರೆಸ್ಸಿಗರು ಮನ್ನಣೆ ನೀಡಿದ್ದರಿಂದ ದೇಶ ವಿಭಜನೆಯಾಗಿ ಇಂದಿನವರೆಗೂ ಆಪರೇಷನ್ ಸಿಂದೂರಗಳಂತಹ ಯುದ್ಧ ಮಾಡುವ ಸ್ಥಿತಿ ನಿರ್ಮಾಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಚ್ಚರು, ಪ್ರೆಂಚರು, ಪೊರ್ಚಗೀಸರು, ಇಂಗ್ಲಿಷರು ಆಳಿದರು ಭಾರತ ವಿಭಜನೆ ಆಗಿರಲಿಲ್ಲ. ಆದರೆ ಜಾತಿಯ ಆಧಾರದಲ್ಲಿ ಅಂದಿನ ಪ್ರಧಾನಿ ನೆಹರು ದೇಶ ವಿಭಜಿಸಿ, ಒಡೆದರು. ಒಂದೇ ಮಾತರಂ ಗೀತೆಯೊಂದಿಗೆ ಭಾರತ ಇಂದಿಗೂ ಒಂದೇ ಆಗಿ ನಿಂತಿದೆ. ಅಮೆರಿಕಾದಂತಹ ಬಲಾಢ್ಯ ರಾಷ್ಟ್ರಗಳ ಬೆದರಿಕೆಗಳಿಗೂ ಬಗ್ಗದೆ ದೇಶ ಮುನ್ನಡೆದಿದೆ ಎಂದರು.ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಅಖಂಡ ದೇಶ ಒಡೆಯಲು ಕಾಂಗ್ರೆಸ್ ಕಾರಣವಾಗಿದೆ. ನರೇಂದ್ರ ಮೋದಿ ಅವರು ದೇಶ ಪ್ರೇಮ ಮೆರೆಯುತ್ತಾ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೆದರದೆ ಹೋರಾಟ ಮಾಡಿದ ಚನ್ನಮ್ಮ, ರಾಯಣ್ಣನ ನಾಡಿನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು ಸಂತಸದ ವಿಷಯದಾಗಿದೆ ಅವರ ಸ್ಮರಣೆ, ಅನುಕರಣೆ ಸದಾ ನಮ್ಮದಾಗಬೇಕೆಂದರು.
ಮಾಜಿ ಶಾಸಕ ನರೇಂದ್ರಬಾಬು ಮಾತನಾಡಿ, ದೇಶದ ಬಾಹ್ಯ ಶತ್ರುಗಳನ್ನು, ಉಗ್ರಗಾಮಿಗಳನ್ನು ಮಟ್ಟ ಹಾಕಲು ನಮ್ಮ ಸೇನಿಕರು ಸದಾ ಸಿದ್ಧರಿದ್ದಾರೆ. ಆದರೆ ಆಂತರಿಕ ಭಯೋತ್ಪಾದಕರಿಂದ ಭದ್ರತೆಗೆ ಸವಾಲವೊಡ್ಡುತ್ತಿದ್ದಾರೆ. ಇವರ ನಿಗ್ರಹಕ್ಕೆ ನಾವು ನಿವೆಲ್ಲ ಸಿದ್ಧರಾಗಬೇಕಾಗಿದೆ ಎಂದು ಕರೆ ಕೊಟ್ಟರು.ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಒಂದು ಕಾಲದಲ್ಲಿ ಹಾವಾಡಿಗರು, ಭಿಕ್ಷುಕರ, ಬಡವರ ರಾಷ್ಟ್ರ ಎಂದು ಹೇಳಲಾಗುತ್ತಿದ್ದ ಭಾರತ ಇಂದು ಮೋದಿಜಿ ಪರಿಶ್ರಮದಿಂದ ವಿಶ್ವಕ್ಕೆ ಗುರುವಾಗಿ, ಜಗತ್ತಿನಲ್ಲಿ ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ಬರಲಿದೆ ಎಂದರು. ಮುಖಂಡ ವಿಜಯ ಮೆಟಗುಡ್ಡ ಮಾತನಾಡಿ, ದೇಶದ ಸ್ವಾತಂತ್ರ್ಯಾಚರಣೆ ದೇಶದ ಜಾತಿಯತೆಯನ್ನು ಹೊಗಲಾಡಿಸಲು ಸಹಕಾರಿಯಾಗಿದೆ. ಆಪರೇಷನ್ ಸಿಂದೂರ ದೇಶದ ಬಲಿಷ್ಠತೆಯನ್ನು ಜಗತ್ತಿಗೆ ತೋರಿಸಿದೆ ಎಂದರು.
ಬೃಹತ್ ತಿರಂಗಾ ಬೈಕ್ ರ್‍ಯಾಲಿ ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಣಿ ಚನ್ನಮ್ಮ ಸಮಾಧಿಗೆ ಗೌರವ ಸಮರ್ಪಿಸುವ ಮೂಲಕ ಮುಕ್ತಾಯವಾಯಿತು.ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಂಡಲ ಅಧ್ಯಕ್ಷ ಸುಭಾಷ ತುರಮರಿ, ಗೀತಾ ಸುತಾರ, ಗುರು ಮೆಟಗುಡ್ಡ, ರಾಜು ಕುಡಸೋಮಣ್ಣವರ, ಗುರುಪಾದ ಕಳ್ಳಿ, ಮಡಿವಾಳಪ್ಪ ಹೋಟಿ, ಎಫ್.ಎಸ್. ಸಿದ್ಧನಗೌಡ್ರ, ವಿಶಾಲ ಬೋಗೂರ, ಶ್ರೀಶೈಲ ಯಡಳ್ಳಿ, ಆನಂದ ಮೂಗಿ, ಸಂದೀಪ ದೇಶಪಾಂಡೆ, ಈರಯ್ಯ ಖೋತ್, ಜಗದೀಶ ಬೂದಿಹಾಳ, ಸಂತೋಷ ಹಡಪದ, ಸಚಿನ್ ಕಡಿ, ಲಕ್ಕಪ್ಪ ಕಾರಗಿ, ಶ್ರೀಕರ ಕುಲಕರ್ಣಿ, ಮನೋಜ್ ಪಾಟೀಲ ಹಾಗೂ ನೂರಾರು ಕಾರ್ಯಕರ್ತರು ಇದ್ದರು.