ಕನ್ನಡಪ್ರಭ ವಾರ್ತೆ ತಿಪಟೂರು
ಶಿಕ್ಷಣ, ಆರೋಗ್ಯ, ಸುರಕ್ಷತೆ, ಸ್ವಾವಲಂಬನೆ, ಮೂಲಭೂತ ಹಕ್ಕುಗಳೆಂಬ ಸೌಲಭ್ಯಗಳನ್ನು ಒದಗಿಸಿಕೊಟ್ಟು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ದೇಶದ ಏಳಿಗಾಗಿ ತನ್ನ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಸಂಭ್ರಮಿಸಿದ ಭಾರತದ ಮೊದಲ ಪ್ರಧಾನಿಯೇ ಪಂಡಿತ್ ಜವಹರಲಾಲ್ ನೆಹರು ಎಂದು ನಗರದ ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು.ನಗರದ ಎಸ್.ವಿ.ಪಿ. ಸಂಯುಕ್ತ ಪದವಿ ಪೂರ್ವ ಕಾಲೇಜು, ಎನ್.ಎಸ್.ಎಂ.ಬಾಲಿಕಾ ಶಾಲೆ, ಎಸ್.ವಿ.ಪಿ. ಹಿರಿಯ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳೇ ದೇಶದ ಅಮೂಲ್ಯವಾದ ಆಸ್ತಿ, ದೇಶವನ್ನು ಕಟ್ಟುವ ಕಟ್ಟಾಳುಗಳು, ಭವಿಷ್ಯವನ್ನು ಬರೆಯುವ ಶಿಲ್ಪಿಗಳು, ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ಮೌಲ್ಯಾಧಾರಿತ ಶಿಕ್ಷಣ, ದೇಶಾಭಿಮಾನ, ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯತಾ ಭಾವನೆಗಳನ್ನು ಭಿತ್ತಿ ಬೆಳೆಸಬೇಕು. ಹಕ್ಕುಗಳ ಚಲಾವಣೆ ಮತ್ತು ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಬೇಕು. ಪ್ರತಿ ಮಗುವಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಛಲವನ್ನು ಬೆಳೆಸಬೇಕು. ಈ ದಿಸೆಯಲ್ಲಿ ನೆಹರುರವರು ಪಂಚವಾರ್ಷಿಕ ಯೋಜನೆ, ಪಂಚಶೀಲತತ್ವಗಳನ್ನು ಜಾರಿಗೊಳಿಸಿ ವಿಶ್ವವೇ ತಿರುಗಿನೋಡುವಂತೆ ಮಾಡಿದ ಧೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಆದ್ದದರಿಂದ ಪ್ರತಿಯೊಬ್ಬ ಮಕ್ಕಳು ಅವರ ಸ್ವಾತಂತ್ರ್ಯದ ಹೋರಾಟದ ಪರಿಕಲ್ಪನೆ, ರಾಷ್ಟ್ರಾಭಿಮಾನ, ಆದರ್ಶ, ಆಚಾರ ವಿಚಾರಗಳನ್ನು ಅರಿತು ನಡೆದರೆ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ೧೦ನೇ ತರಗತಿ ವಿದ್ಯಾರ್ಥಿ ಡಿಂಪುಕುಮಾರ್ ಮಾತನಾಡಿ ನೆಹರು ಮಕ್ಕಳ ಬಗ್ಗೆ ಅಗಾಧವಾದ ಒಲವನ್ನು ಇಟ್ಟುಕೊಂಡಿದ್ದರು. ದೇಶದ ಸಂಪತ್ತನ್ನಾಗಿ ಮಾಡಲು ಹಗಲಿರುಳು ಯೋಜನೆಗಳ ಮೂಲಕ ಶ್ರಮಿಸಿದ್ದರು. ಅವರ ಶಕ್ತಿ ಮತ್ತು ಪ್ರತಿಭೆಗಳನ್ನು ಅನಾವರಣಗೊಳಿಸಿ ಸದ್ಬಳಕೆ ಮಾಡಿಕೊಂಡು ಮಕ್ಕಳ ಹಾಗೂ ದೇಶದ ಗೌರವವನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿಯೆಂದು ಬಣ್ಣಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಉದಯ್‌ಶಂಕರ್ ಮಾತನಾಡಿ ಮಕ್ಕಳನ್ನು ಶೋಷಣೆ, ಗುಲಾಮಗಿರಿ, ಕಿರುಕುಳದಿಂದ ಮುಕ್ತರನ್ನಾಗಿ ಮಾಡಲು ಅಗತ್ಯವಾದ ಶಿಕ್ಷಣವನ್ನು ಕೊಡಿಸುವಲ್ಲಿ ನೆಹರುರವರ ಪಾತ್ರ ಹಿರಿದಾದುದಾಗಿತ್ತು ಎಂದು ತಿಳಿಸಿದರು. ವಿದ್ಯಾರ್ಥಿಗಳಾದ ರೋಹಿತ್, ಜಯಲಕ್ಷ್ಮೀ, ಚಿನ್ಮಯ್ ಗೌಡ, ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ವಿ.ಪಿ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಶೈಲಾಸತೀಶ್‌ಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಎಸ್.ಬಿ.ರೇಣು, ಉಪನ್ಯಾಸಕ ಎಸ್.ಬಿ.ಜಗದೀಶ್, ಮುಖ್ಯಶಿಕ್ಷಕರುಗಳಾದ ಎಂ.ವಿಜಯಕುಮಾರಿ, ಪಿ. ಪದ್ಮ, ಎನ್. ಬಿಂದು, ಕೆ.ಪಿ. ಹೇಮಲತಾ, ಶಿಕ್ಷಕರುಗಳಾದ ಸಂತೋಷ್, ಸಿದ್ದೇಶ್, ಜುಂಜಯ್ಯ, ಪಿ. ವೀರೇಶ್ ಮತ್ತಿತರರಿದ್ದರು. ಶಾಲಾ-ಕಾಲೇಜುಗಳ ಮಕ್ಕಳಿಂದ ಮಕ್ಕಳಿಂದ ಸಂತೆಯನ್ನು ಏರ್ಪಡಿಸಲಾಗಿತ್ತು.