ನೆರೆ ಹಾವಳಿ, ದೀವಳ್ಳಿಯಲ್ಲಿ ಗುಡ್ಡ ಕುಸಿತ

KannadaprabhaNewsNetwork |  
Published : Jul 20, 2024, 12:46 AM IST
ಫೋಟೋ : ೧೯ಕೆಎಂಟಿ_ಜೆಯುಎಲ್_ಕೆಪಿ೧ : ದೀವಳ್ಳಿಯ ಉಳ್ಳೂರಮಠ ಕ್ರಾಸ್ ಬಳಿ ಗುಡ್ಡ ಕುಸಿತದ ದ್ರಶ್ಯ.ಫೋಟೋ : ೧೯ಕೆಎಂಟಿ_ಜೆಯುಎಲ್_ಕೆಪಿ೧ಎ : ಕುಸಿದ ಗುಡ್ಡದ ಮಣ್ಣು ರಸ್ತೆಯ ಮೇಲಿಂದ ತೆರವುಗೊಳಿಸುತ್ತಿರುವುದು. | Kannada Prabha

ಸಾರಾಂಶ

ದೀವಳ್ಳಿ ಸನಿಹದ ಉಳ್ಳೂರಮಠ ಕ್ರಾಸ್ ಬಳಿ ಕುಮಟಾ- ಶಿರಸಿ ರಾಜ್ಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.

ಕುಮಟಾ: ತಾಲೂಕಿನಲ್ಲಿ ಅಘನಾಶಿನಿ, ಚಂಡಿಕಾ, ಬಡಗಣಿ ಸಹಿತ ಉಪನದಿಗಳು, ಹಳ್ಳಕೊಳ್ಳಗಳಲ್ಲಿ ಶುಕ್ರವಾರ ಪ್ರವಾಹ ಉಂಟಾಗಿದ್ದು, ನದಿ ಆಸುಪಾಸಿನ ಪ್ರದೇಶಗಳಲ್ಲಿ ನೆರೆಯ ಹಾವಳಿ ಜೋರಾಗಿದೆ.

ಚಂಡಿಕಾ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಕತಗಾಲ ಬಳಿ ರಸ್ತೆಯ ಮೇಲೆ ನೀರು ಬಂದು ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್ ಆಗಿದೆ. ರಸ್ತೆಯ ಎರಡೂ ದಿಕ್ಕಿನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ದೋಣಿಯ ಮೂಲಕ ಆಚೀಚೆ ಸಾಗಿಸಲಾಗುತ್ತಿದೆ.

ಉಳಿದಂತೆ ಊರಕೇರಿಯ ಗುಡ್ನಕಟ್ಟು, ಕೂಜಳ್ಳಿ ಸನಿಹದ ಹಿರೇಕಟ್ಟು, ಹೆಗಡೆ, ದೀವಗಿ, ಮೂರೂರು, ಕಲ್ಲಬ್ಬೆ, ಸಂತೆಗುಳಿ, ಕೋಡ್ಕಣಿ, ಬರ್ಗಿ ಮುಂತಾದ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೆಡೆ ನದಿಯ ನೀರು ಹಾಗೂ ಗಜನಿ ಪ್ರದೇಶದ ಹಿನ್ನೀರು ಕೂಡಾ ಮನೆಗಳಿಗೆ ನುಗ್ಗಲಾರಂಭಿಸಿದೆ. ಅಪಾಯ ಇರುವ ಪ್ರದೇಶಗಳಿಂದ ಜನರನ್ನು ನಿರಂತರವಾಗಿ ಸ್ಥಳಾಂತರಿಸಲಾಗುತ್ತಿದೆ.

ಗುಡ್ಡ ಕುಸಿತ:ತಾಲೂಕಿನ ದೀವಳ್ಳಿ ಸನಿಹದ ಉಳ್ಳೂರಮಠ ಕ್ರಾಸ್ ಬಳಿ ಕುಮಟಾ- ಶಿರಸಿ ರಾಜ್ಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಕುಮಟಾ ಹಾಗೂ ಸಿದ್ದಾಪುರ ಮಾರ್ಗ ಬಂದ್ ಆಗಿದೆ. ರಸ್ತೆಯ ಮೇಲೆ ಬಿದ್ದಿರುವ ಮರಮಟ್ಟು, ಕಲ್ಲುಮಣ್ಣು ತೆರವಿಗೆ ಪರಿಶೀಲನೆ ನಡೆಸಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಇದೇ ಮಾರ್ಗದಲ್ಲಿ ಹಲವೆಡೆ ಹಳ್ಳದ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

ಟೋಲ್ ವಸೂಲಿ ನಿಲ್ಲಿಸಿ: ಕಳೆದ ಒಂದು ದಶಕದಿಂದ ಜಿಲ್ಲೆಯ ಚತುಷ್ಪಥದಲ್ಲಿ ನೂರಾರು ಅವಘಡಗಳಿಗೆ ಹಾಗೂ ಜೀವಹಾನಿಗೆ ಕಾರಣವಾದ ಐಆರ್‌ಬಿ ಕಾಮಗಾರಿ ಜಿಲ್ಲೆಯ ಜನರ ಪ್ರಾಣದ ಜತೆ ಚೆಲ್ಲಾಟವಾಗಿದೆ. ಕಾಮಗಾರಿಯ ಅವೈಜ್ಞಾನಿಕತೆಯನ್ನು ಸರಿಪಡಿಸುವ ಉದ್ದೇಶದಿಂದ ಮೊದಲು ಹೊಳೆಗದ್ದೆಯಲ್ಲಿ ನಡೆಸುತ್ತಿರುವ ಟೋಲ್ ವಸೂಲಿ ಬಂದ್ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪಟಗಾರ ಹೊಳೆಗದ್ದೆ ಟೋಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಒಂದು ವಾರದಲ್ಲಿ ಟೋಲ್ ಆಕರಣೆ ಬಂದ್ ಮಾಡದಿದ್ದಲ್ಲಿ ಈ ಬಾರಿ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ರೈತರಿಗೆ ಹಾನಿ: ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ರೈತರ ತೋಟ, ಗದ್ದೆಗಳಿಗೆ ಸಾಕಷ್ಟು ಹಾನಿಯಾಗಿದ್ದು, ವಿಚಾರಿಸುವವರಿಲ್ಲದಂತಾಗಿದೆ.

ಒಂದೆಡೆ ಅತಿವೃಷ್ಟಿ, ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿಯಿಂದಾಗಿ ಸಂಪೂರ್ಣ ತಾಲೂಕಾಡಳಿತ ಹಾಗೂ ಪಂಚಾಯಿತಿ ಆಡಳಿತಕ್ಕೆ ಪುರುಸೊತ್ತಿಲ್ಲದಂತಾಗಿದೆ. ಇದೆಲ್ಲದರ ನಡುವೆ ರೈತನ ಕಷ್ಟ ಗದ್ದೆ, ತೋಟಗಳಲ್ಲಿ ಆಗುತ್ತಿರುವ ಹಾನಿಯನ್ನು ನೋಡುವವರು ಇಲ್ಲದಂತಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ