;Resize=(412,232))
ಕನ್ನಡಪ್ರಭ ವಾರ್ತೆ ಬೆಂಗಳೂರು ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ತನ್ನ ನೆರೆಮನೆಯ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಕೊಂದು ರಸ್ತೆ ಬದಿ ಮೃತದೇಹ ಬಿಸಾಡಿ ಹೋಗಿದ್ದ ಚಿಂದಿ ಆಯುವ ವ್ಯಕ್ತಿಯೊಬ್ಬನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಇಜಾಮುಲ್ ಶೇಖ್ ದಂಪತಿ ಪುತ್ರಿ ಶಹನ್ಹಾಝ್ ಖತುನ್ ಕೊಲೆಯಾದ ದುರ್ದೈವಿ. ಈ ಹತ್ಯೆ ಎಸಗಿ ಪರಾರಿಯಾಗಿದ್ದ ಆರೋಪಿ ಯೂಸೆಫ್ ಅಲಿಯಾಸ್ ಕಬೀರ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಎರಡು ದಿನಗಳ ಹಿಂದೆ ಮನೆ ಬಳಿ ಆಟವಾಡುತ್ತಿದ್ದಾಗ ಬಾಲಕಿಯನ್ನು ಅಪಹರಿಸಿ ಆರೋಪಿ ಹತ್ಯೆಗೈದಿದ್ದ. ಬಳಿಕ ನೆಲ್ಲೂರು ಹಳ್ಳಿ ಸಮೀಪದ ರಸ್ತೆ ಬದಿ ಬಾಲಕಿ ಮೃತದೇಹ ಮಂಗಳವಾರ ರಾತ್ರಿ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೂಲಿ ಕಾರ್ಮಿಕ ಇಜಾಮುಲ್ ಶೇಖ್ ಹಾಗೂ ಆರೋಪಿ ಯೂಸೆಫ್ ಮೂಲತಃ ಪಶ್ಚಿಮ ಬಂಗಾಳ ರಾಜ್ಯದವರಾಗಿದ್ದು, ಕೆಲ ದಿನಗಳ ಹಿಂದೆ ಕೂಲಿ ಅರಸಿಕೊಂಡು ನಗರಕ್ಕೆ ಅವರು ಬಂದಿದ್ದರು. ನೆಲ್ಲೂರಹಳ್ಳಿಯಲ್ಲಿ ನೆರೆಹೊರೆಯಲ್ಲೇ ವಾಸವಾಗಿದ್ದ ಅವರು, ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ನೆರೆಹೊರೆಯವರ ಮಧ್ಯೆ ಜಗಳವಾಗಿದೆ. ಈ ಗಲಾಟೆ ಹಿನ್ನೆಲೆಯಲ್ಲಿ ಕೆರಳಿದ ಆರೋಪಿ, ಶೇಖ್ ಅವರ 6 ವರ್ಷದ ಮಗಳನ್ನು ಸೋಮವಾರ ಮಧ್ಯಾಹ್ನ ಅಪಹರಿಸಿದ್ದಾನೆ. ಬಳಿಕ ಕುತ್ತಿಗೆ ಹಿಸುಕಿ ಕೊಂದು ಬಳಿಕ ಪ್ಲಾಸ್ಟಿಕ್ ಕವರ್‌ನಲ್ಲಿ ಮೃತದೇಹ ಸುತ್ತಿ ರಸ್ತೆ ಬದಿ ಎಸೆದು ಆರೋಪಿ ಪರಾರಿಯಾಗಿದ್ದ.
ಮನೆಯಲ್ಲಿ ಮಗಳು ಕಾಣದೆ ಹೋದಾಗ ಆಕೆಗೆ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಮಂಗಳವಾರ ಅವರು ದೂರು ನೀಡಿದ್ದಾರೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಬಾಲಕಿಗೆ ಸ್ಥಳೀಯವಾಗಿ ಹುಡುಕಾಟ ನಡೆಸಿದಾಗ ನೆಲ್ಲೂರಹಳ್ಳಿಯ ದೇವಾಲಯದ ರಸ್ತೆಯ ಬದಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ಈ ಹತ್ಯೆ ವಿಚಾರ ತಿಳಿದ ಕೂಡಲೇ ಆರೋಪಿ ಪತ್ತೆಗೆ ವೈಟ್‌ಫೀಲ್ಡ್ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಒಳಗೊಂಡ ತಂಡ ಕಾರ್ಯಾಚರಣೆಗಿಳಿಯಿತು. ಈ ಕೃತ್ಯ ಎಸಗಿ ರಾತ್ರೋರಾತ್ರಿ ನಗರ ತೊರೆಯಲು ಯೂಸೆಫ್ ಯತ್ನಿಸಿದ್ದ. ಅಷ್ಟರಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ತಾಯಿ ಜತೆ ಯೂಸೆಫ್ ಜಗಳ
ಹಲವು ದಿನಗಳ ವೈಯಕ್ತಿಕ ವಿಷಯವಾಗಿ ತನ್ನ ನೆರೆಮನೆಯಲ್ಲಿ ನೆಲೆಸಿದ್ದ ಬಾಲಕಿ ತಾಯಿ ಜತೆ ಯೂಸೆಫ್‌ಗೆ ಮನಸ್ತಾಪವಾಗಿತ್ತು. ಸಣ್ಣಪುಟ್ಟ ವಿಚಾರಗಳಿಗೆ ಎರಡು ಕುಟುಂಬಗಳು ಜಗಳವಾಡುತ್ತಿದ್ದವು. ಈ ಹಗೆತನ ಹಿನ್ನೆಲೆಯಲ್ಲಿ ಬಾಲಕಿಯನ್ನು ಅಪಹರಿಸಿ ಆರೋಪಿ ಹತ್ಯೆ ಮಾಡಿರುವ ಮಾಹಿತಿ ಇದೆ. ಈಗಷ್ಟೇ ಆತನ ಬಂಧನವಾಗಿದ್ದು, ವಿಚಾರಣೆ ನಡೆಸಿದ ಬಳಿಕ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ. ಪ್ರಾಥಮಿಕ ತನಿಖೆಯಲ್ಲಿ ನೆರೆಹೊರೆಯ ಜಗಳವೇ ಹತ್ಯೆಗೆ ಮೂಲ ಕಾರಣವಾಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.