ನಮ್ಮ ಹತ್ರ ರೊಕ್ಕಾನೂ ಬಿಟ್ಟಿಲ್ಲಾ, ರಶೀದಿನೂ ಕೊಟ್ಟಿಲ್ಲಾ

KannadaprabhaNewsNetwork |  
Published : Feb 26, 2025, 01:04 AM IST
ಅಳ್ನಾವರ ತಾಲೂಕಿನ ಗ್ಯಾರಂಟಿ ಯೋಜನೆಯ ಮಾಸಿಕ ಸಭೆ ಅನುಷ್ಠಾನ ಸಮೀತಿಯ ಅಧ್ಯಕ್ಷ ವಿನಾಯಕ ಕುರುಬರ ಮಾತನಾಡಿದರು. | Kannada Prabha

ಸಾರಾಂಶ

ಸುಮಾರು ೭೨ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದು, ಇವರಲ್ಲಿ ಮೂರು ಸಂಪರ್ಕ ಮಾತ್ರ ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನುಳಿದವರು ಮಾಸಿಕ ಶುಲ್ಕ ತುಂಬುತ್ತಲೇ ಬರುತ್ತಿದ್ದಾರೆ.

ಅಳ್ನಾವರ: ಸಾಹೇಬ್ರ ಸರ್ಕಾರ ಫ್ರೀ ಕರೇಂಟ್ ಕೊಟ್ಟೈತಿ ಅಂತಾರ ಆದರ ನಾವ ಮಾತ್ರ ತಿಂಗಳಾ ರೋಕ್ಕಾ ತುಂಬಾತೇವರೀ... ಇಷ್ಟದಿನಾ ನಮ್ಮ ಹತ್ರ ರೊಕ್ಕಾನೂ ಬಿಟ್ಟಿಲ್ಲಾ, ನಮಗ ರಶೀದಿನೂ ಕೊಟ್ಟಿಲ್ಲಾ...

ಇಂತಹ ಆರೋಪವೊಂದು ಅಳ್ನಾವರ ತಾಲೂಕಿನ ಹೊನ್ನಾಪೂರ ಪಂಚಾಯಿತಿ ವ್ಯಾಪ್ತಿಯ ಗೌಳಿಗರೇ ವಾಸವಾಗಿರುವ ಶಿವನಗರ ಗ್ರಾಮದಲ್ಲಿ ಕೇಳಿ ಬಂದಿತು.

ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಗೃಹಜ್ಯೋತಿ ಯೋಜನೆಯ ವಿಷಯ ಚರ್ಚೆಗೆ ಬಂದ ಸಮಯದಲ್ಲಿ ಅಲ್ಲಿನ ನಿವಾಸಿಗಳು ಉಚಿತ ವಿದ್ಯುತ್ ನಮಗೆ ಅನ್ವಯಿಸುವುದಿಲ್ಲವೇ? ನಮ್ಮಿಂದ ನಿಯಮಿತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ತುಂಬದಿದ್ದರೆ ಕರೆಂಟ್ ಕಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹಣ ತುಂಬಿದ ರಸೀದಿ ಕೇಳಿದರೆ ಇಂದು ನಾಳೆ, ನಾಡಿದ್ದು, ಮುಂದಿನ ತಿಂಗಳು ಕೊಡುತ್ತೇವೆ ಎಂದು ಉತ್ತರ ನೀಡುತ್ತಾರೆ ಎನ್ನುವ ಅನೇಕ ದೂರುಗಳು ಸಭೆಯಲ್ಲಿ ಗಮನ ಸೆಳೆದರು.

ಇಲ್ಲಿ ಸುಮಾರು ೭೨ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದು, ಇವರಲ್ಲಿ ಮೂರು ಸಂಪರ್ಕ ಮಾತ್ರ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನುಳಿದವರು ಮಾಸಿಕ ಶುಲ್ಕ ತುಂಬುತ್ತಲೇ ಬರುತ್ತಿದ್ದಾರೆ.

ಈ ಸಮಸ್ಯೆಗಳನ್ನು ಆಲಿಸಿದ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಮಾತನಾಡಿ, ಗ್ರಾಮದ ಸಮಸ್ಯೆಯ ಬಗ್ಗೆ ಕುಲಂಕಷವಾಗಿ ವಿಚಾರಣೆ ಮಾಡಲು ಸಮಯ ನಿಗದಿ ಪಡಿಸಿ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಹೆಸ್ಕಾಂ ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡಲು ಸೂಚಿಸಿದರು.

ಸರಕಾರ ಪ್ರಾರಂಭಿಸಿರುವ ಈ ಐದು ಯೋಜನೆಗಳು ಪ್ರತಿಯೊಬ್ಬ ಅರ್ಹ ಕುಟುಂಬಕ್ಕೆ ತಲುಪಬೇಕು ಎನ್ನುವ ಮಹಾತ್ವಾಕಾಂಕ್ಷೆ ಎಲ್ಲರದ್ದಾಗಿದ್ದು, ಯೋಜನೆಗಳ ಸದುಪಯೋಗಪಡೆದುಕೊಳ್ಳುವಂತೆ ಹೇಳಿದರು.

ಹೊನ್ನಾಪೂರದಿಂದ ಸುಮಾರು ಏರಡು ಕಿಮೀ ಅಂತರದಲ್ಲಿರುವ ಶಿವನಗರಕ್ಕೆ ಬಸ್‌ ನಿಲುಗಡೆ ಕಲ್ಪಿಸುತ್ತಿಲ್ಲ ಎನ್ನುವ ಆರೋಪಕ್ಕೆ ನಿಯಂತ್ರಣಾಧಿಕಾರಿ ಸುರೇಶ ಕಲ್ಲವಡ್ಡರ ಪ್ರತಿಕ್ರಿಯಿಸಿ, ಬಸ್ ಚಾಲಕ, ನಿರ್ವಾಹಕರಿಗೆ ಬಸ್ ನಿಲುಗಡೆಗೆ ಸೂಚನೆ ನೀಡುವುದಾಗಿ ಹೇಳಿದರು.

ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ಪ್ರಶಾಂತ ತುರಕಾಣಿ, ಸಿಡಿಪಿಒ ಉಮಾ ಬಳ್ಳೊಡಿ, ಗ್ರಾಮದ ಹಿರಿಯರಾದ ಪ್ರದೀಪ ಗಾವಡೆ, ದೊಂಡು ಶಿಂಧೆ, ಕೊಂಡು ಕೊಳಾಪಟ್ಟೆ, ಸಿದ್ದು ಯಮಕರ, ಬಮ್ಮು ಯಮಕರ, ಹೆಸ್ಕಾಂ ಅಧಿಕಾರಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಥಿ ಚಿತ್ರದ ನಟ ‘ಸೆಂಚುರಿ’ಗೌಡ ಸೊಂಟದ ಮೂಳೆ ಮುರಿದು ನಿಧನ
ರಾಜ್ಯ ರಾಜಕಾರಣದಲ್ಲಿ ನನ್ನ ಕ್ಷೇತ್ರ ಚಾಮರಾಜನಗರ : ಪ್ರತಾಪ್‌ ಸಿಂಹ