ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ನೇಜಾರು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ ಮಾಡಿದ್ದ ಆರೋಪಿ ಬೆಳಗಾವಿಯ ಪ್ರವೀಣ ಚೌಗುಲೆ (39)ಯನ್ನು ಬುಧವಾರ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣೆಗೆ ಹಾಜರುಪಡಿಸಲಾಗಿದ್ದು, ಆರೋಪಿ ತಾನು ನಿರಪರಾಧಿ, ಯಾವುದೇ ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ.ನ.12ರಂದು ಏರ್ ಇಂಡಿಯಾ ಏಕ್ಸ್‌ಪ್ರೆಸ್‌ಲ್ಲಿ ಸಹೋದ್ಯೋಗಿಯಾಗಿದ್ದ ಐನಾಜ್ ಮತ್ತು ಅಕೆಯ ತಾಯಿ, ಸಹೋದರಿ ಮತ್ತು ಸಹೋದರನನ್ನು ಹಾಡಹಗಲೇ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ನಂತರ ಆತನನ್ನು ಬಂಧಿಸಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು.ಮಾ.13ರಂದು ದೋಷಾರೋಪಣೆ ಪ್ರಕ್ರಿಯೆ ನಡೆಯಬೇಕಾಗಿತ್ತಾದರೂ, ಚೌಗುಲೆಗೆ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದ್ದರಿಂದ ಬುಧವಾರ ನ್ಯಾಯಾಲಯಕ್ಕೆ ಪೊಲೀಸರು ಬಿಗಿ ಭದ್ರತೆಯಲ್ಲಿ ಹಾಜರುಪಡಿಸಿದರು.ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆತನ ಮೇಲೆ ಹೊರಿಸಲಾಗಿರುವ ಆರೋಪಪಟ್ಟಿಯನ್ನು ಓದಿ ಹೇಳಲಾಯಿತು. ಅದನ್ನು ಆಲಿಸಿದ ಆತ ಅವುಗಳನ್ನು ನಿರಾಕರಿಸಿದ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ.ಇದರಿಂದ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಅವರು ಪ್ರಕರಣದ ವಿಚಾರಣೆಗೆ ಮೊದಲು ಏ.5ರಂದು ಆರೋಪಿಗೆ ಪ್ರಿ ಟ್ರಾಯಲ್ ಕಾನ್ಫರೆನ್ಸ್ ನಡೆಸಲು ಆದೇಶಿಸಿದರು.ಈ ಕಾನ್ಫರೆನ್ಸ್‌ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಪಿಪಿ, ಆರೋಪಿ ಪರ ವಕೀಲರು ಭಾಗವಹಿಸಿ, ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಯಲಿದೆ. ನಂತರ ವಿಚಾರಣೆಗೆ ಯಾವೆಲ್ಲ ಸಾಕ್ಷಿಗಳ ಅಗತ್ಯ ಇದೆ ಎಂಬುದನ್ನು ತೀರ್ಮಾನಿಸಿ, ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುತ್ತದೆ.* ಮತ್ತಿನಲ್ಲಿದ್ದ ಪೊಲೀಸ್ ಅಧಿಕಾರಿಅತ್ಯಂತ ಗಂಭೀರವಾದ ನಾಲ್ಕು ಮಂದಿ ಕೊಲೆ ಮಾಡಿರುವ ಪ್ರಕರಣದ ಆರೋಪಿಯನ್ನು ಬೆಂಗಳೂರಿನಿಂದ ಉಡುಪಿಗೆ ಕರೆ ತಂದಿದ್ದ ಪೊಲೀಸರ ಪೈಕಿ ಒಬ್ಬ ಅಧಿಕಾರಿ ಮದ್ಯಪಾನದ ಮತ್ತಿನಲ್ಲಿದ್ದು, ಅವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಉಡುಪಿ ಎಸ್ಪಿ ತಿಳಿಸಿದ್ದಾರೆ.
ಮದ್ಯದ ಮತ್ತಿನಲ್ಲಿದ್ದ ಈ ಅಧಿಕಾರಿ, ನ್ಯಾಯಾಲಯದ ಹಿಂದಿನ ಬಾಗಿಲಿನಿಂದ ಒಳಗೆ ಕರೆತಂದಾಗ, ಅಲ್ಲಿ ಕುತೂಹಲದಿಂದ ಸೇರಿದ್ದ ಜನರನ್ನು ನಿಯಂತ್ರಿಸುವ ನೆಪದಲ್ಲಿ ವಾಗ್ವಾದಕ್ಕಿಳಿದರು. ತಾವು ಉಮೇಶ್ ರೆಡ್ಡಿ ಎಂಬ ಗಾಂಜಾ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡುತ್ತಿದ್ದೇವೆ ಎಂದು ಸುಳ್ಳು ಕೂಡ ಹೇಳಿದರು. ಯಾವ ಪ್ರಕರಣ, ಯಾರು ಆರೋಪಿ ಎಂಬುದೇ ಪೊಲೀಸ್ ಅಧಿಕಾರಿಗೆ ತಿಳಿದಿಲ್ಲ, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದರು.