ಕನ್ನಡಪ್ರಭ ವಾರ್ತೆ ಹಿರೀಸಾವೆ
ಪಟ್ಟಣದ ಶ್ರೀ ಚೌಡೇಶ್ವರಿ ಮುಖ್ಯದ್ವಾರದ ಬಳಿ ಲೋಕಸಭೆ ಚುನಾವಣೆ ಹಿನ್ನೆಲೆ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಹೋಬಳಿ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಈ ಜೀವ ಹಾಗೂ ಜೀವನ ನಾಡಿನ ಜನತೆಗೆ ಮೀಸಲು ಎಂದರು.
೬೦ ವರ್ಷಗಳ ಕಾಲ ರಾಜಕೀಯ ಹೋರಾಟ ಮಾಡಿ, ಈಗ ಬಿಜೆಪಿ ಜೊತೆ ಏಕೆ ಹೋಗಿದ್ದೀರಿ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ವಿರೋಧಿಗಳು ನನ್ನನ್ನು ಹಂಗಿಸುತ್ತಾರೆ. ಕೇಳಲು ಅವರಿಗೆ ಅಧಿಕಾರವಿದೆ, ಕೇಳಲಿ ಬಿಡಿ. ನನಗೆ ಅದರ ಬಗ್ಗೆ ಬೇಸರವಿಲ್ಲ ಎಂದು ತಿಳಿಸಿದರು.೧೯೯೬ ರಲ್ಲಿ ನನ್ನನ್ನು ಅಧಿಕಾರದಿಂದ ತೆಗೆದರಷ್ಟೇ, ಬೇರೆ ಏನೂ ಮಾಡಲು ಅವರಿಂದ ಆಗಲಿಲ್ಲ. ನನ್ನ ಅವಧಿಯಲ್ಲಿ ಏನೆಲ್ಲ ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸಿದ್ದೇನೆ ಎಂಬುದು ನನಗೆ ಗೊತ್ತು. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ತಪ್ಪು ಹಾಗೂ ಭ್ರಷ್ಟಾಚಾರ ನಡೆದಿಲ್ಲ ಎಂಬುದು ನನ್ನ ಶತ್ರುಗಳಿಗೂ ಅರಿವಿದೆ. ಆದರೆ ಮಿತ್ರರಿಗೆ ಹೇಳುವ ಯೋಗ್ಯತೆ ಇಲ್ಲ. ಸತ್ಯ ಹೇಳಲು ಆತ್ಮದಲ್ಲಿ ಯಾವುದೇ ಕಳಂಕ ಇರಬಾರದು. ಆಗ ಮಾತ್ರ ಧೈರ್ಯವಾಗಿ ಸತ್ಯ ಹೇಳಬಹುದು ಎಂದು ನಕ್ಕರು.
ದೇಶದಲ್ಲಿ ಸಮಸ್ಯೆಗಳೆದುರಾದ ವೇಳೆ ಹೋರಾಡಿದ್ದೇನೆ. ನಾನು ಪ್ರಧಾನಿಯಾದ ವೇಳೆ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ದೇಶದ ಏಳು ರಾಜ್ಯಗಳಿಗೆ ಜವಾಹಾರ್ ಲಾಲ್ ನೆಹರು ಹೋಗಿರಲಿಲ್ಲ. ನಾನು ಹೋಗಿ ೬೩೦೦ ಕೋಟಿ ರು. ಅನುದಾನ ನೀಡಿ ೭ ರಾಜ್ಯಗಳ ಅಭ್ಯೂದಯಕ್ಕೆ ಕಾರಣನಾಗಿದ್ದೇನೆ ಎಂಬ ಹೆಗ್ಗಳಿಕೆ ನನಗಿದೆ ಎಂದರು.
ನಿಮ್ಮ ಗ್ಯಾರಂಟಿಗಳನ್ನು ನಾನು ವಿರೋಧ ಮಾಡಲ್ಲ, ಆದರೆ ಜನಸಾಮಾನ್ಯರ ದೈನಂದಿನ ಬದುಕಿಗೆ ನೆರವಾಗುವ ಯೋಜನೆಗಳನ್ನು ಜಾರಿಗೊಳಿಸಿ. ಇಲ್ಲವಾದರೆ ನಾಡಿನ ಜನತೆ ಶೀಘ್ರದಲ್ಲಿಯೇ ಬೀದಿಗಿಳಿಯಬೇಕಾಗುತ್ತದೆ. ಆಗ ನಾನು ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ, ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜು ಹಾಗೂ ಬಿಜೆಪಿ ಮುಖಂಡ ಶ್ರೀಕಂಠಪ್ಪ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಗೆಲ್ಲಿಸಿ: ಮೈತ್ರಿ ಅಭ್ಯರ್ಥಿ ಪ್ರಜ್ವಲ್
ಎಲ್ಲದಕ್ಕೂ ಮೊದಲು ಪಾತಾಳಕ್ಕೆ ಕುಸಿದಿದ್ದ ಕೊಬ್ಬರಿ ದರವನ್ನು ಮೇಲೆತ್ತಲು ದೇವೇಗೌಡರ ಮಾರ್ಗದರ್ಶನದಲ್ಲಿ ಸಾಕಷ್ಟು ಪಯತ್ನ ಮಾಡಿದ ಫಲವಾಗಿ ನೆಫೆಡ್ ಮೂಲಕ ಖರೀದಿ ವ್ಯವಸ್ಥೆಯಲ್ಲಿ ೧೨ ಸಾವಿರ ರು. ಬೆಲೆ ರೈತರಿಗೆ ಲಭ್ಯವಾಗುತ್ತಿದೆ. ಈ ದೇಶಕ್ಕೆ ಮೋದಿಯವರು ಮತ್ತೊಮ್ಮೆ ಬೇಕು. ಧರ್ಮದ ಉಳಿವಿಗೆ ಕೈಜೋಡಿಸಬೇಕು. ಸಣ್ಣ-ಪುಟ್ಟ ಲೋಪಗಳಿವೆ, ಸರಿಪಡಿಸಿಕೊಳ್ಳೋಣ. ದೇಶ ಹಾಗೂ ರಾಜ್ಯದ ಹೆಚ್ಚಿನ ಅಭಿವೃದ್ಧಿಗೆ ನಿಮ್ಮ ಬೆಂಬಲ ಅಗತ್ಯವಿದ್ದು ಚುನಾವಣೆಯಲ್ಲಿ ನಮ್ಮ ಪರ ನಿಲ್ಲಬೇಕು ಎಂದು ಕೇಳಿಕೊಂಡರು.