ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕರಡಿಗೋಡು, ಹೊಳೆಕರೆ ರಸ್ತೆಯಲ್ಲಿ ನೀರು ಬಂದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ನದಿ ದಡದಲ್ಲಿರುವ 9 ಮನೆಗಳಿಗೆ ನೀರು ನುಗ್ಗಿದ್ದು ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.
ಪ್ರವಾಹ ಪೀಡಿತ ಪ್ರದೇಶವಾದ ಕರಡಿಗೋಡು ಗ್ರಾಮಕ್ಕೆ ಹಾಗೂ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಮಳೆ ಆರ್ಭಟ ಸ್ವಲ್ಪ ಕಡಿಮೆಯಾಗಿದ್ದು ನದಿ ನೀರು ಸಣ್ಣ ಪ್ರಮಾಣದಲ್ಲಿ ಕಡಿಮೆಯಾಗಿದೆ.ಕತ್ತಲಲ್ಲಿ ಗ್ರಾಮಗಳು:
ಭಾರಿ ಗಾಳಿಯೊಂದಿಗಿನ ಮಳೆಯ ಆರ್ಭಟಕ್ಕೆ ಹಲವು ಕಡೆಗಳಲ್ಲಿ ಮರಗಳು ಧರೆಗುಳಿದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಕಡಿತಗೊಂಡಿದೆ. ಸಿದ್ದಾಪುರ, ಅಮ್ಮತ್ತಿ, ನೆಲ್ಯಹುದಿಕೇರಿ, ಪಾಲಿಬೆಟ್ಟ , ಮಾಲ್ದಾರೆ ಮುಂತಾದ ಕಡೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಹಲವು ಗ್ರಾಮಗಳು ಕೂಡ ಕತ್ತಲಲ್ಲಿ ಮುಳುಗಿವೆ. ವಿದ್ಯುತ್ ಸಂಪರ್ಕವಿಲ್ಲದೆ ಕುಡಿಯಲು ನೀರು ಸಿಗದೆ ಪಟ್ಟಣದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.