ನೆಮ್ಮಲೆ ಕೋಲ್ ಮಂದ್‌: ವಿಜೃಂಭಣೆಯ ಮಂದ್ ನಮ್ಮೆ

KannadaprabhaNewsNetwork |  
Published : Dec 19, 2024, 12:33 AM IST
ಚಿತ್ರ: 18ಎಂಡಿಕೆ5: ಫೋಟೋ :ನೆಮ್ಮಲೆ ಮಂದ್ ನಲ್ಲಿ ಸಾಂಸ್ಕೃತಿಕ ತಂಡ ಹಾಗೂ ಗ್ರಾಮಸ್ಥರು. | Kannada Prabha

ಸಾರಾಂಶ

ಕೊಡವ ಸಂಪ್ರದಾಯದ ಮುಖ್ಯ ಆಚರಣೆಗಳಲ್ಲೊಂದಾದ ಮಂದ್‌ ನಮ್ಮೆ ಆಚರಿಸಲಾಯಿತು. ವಿವಿಧ ಕೊಡವ ನೃತ್ಯಗಳು ಮಂದ್‌ ನಮ್ಮೆಯ ಸಂಭ್ರಮ ನೆನಪಿಸುವಂತಿತ್ತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕು ನೆಮ್ಮಲೆ ಗ್ರಾಮದಲ್ಲಿ ಕೊಡವ ಸಂಪ್ರದಾಯದ ಮುಖ್ಯ ಆಚರಣೆಗಳಲ್ಲೊಂದಾದ ಮಂದ್ ನಮ್ಮೆ ವಿಜೃಂಭಣೆಯಿಂದ ಆಚರಿಸಲಾಯಿತು.

ಇತಿಹಾಸ ಪ್ರಸಿದ್ಧ ನೆಮ್ಮಲೆ ಊರ್ ಮಂದ್‌ನಲ್ಲಿ ಪುತ್ತರಿ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಕತ್ತಿಯಾಟ್, ಪರೆಯಕಳಿ, ವಿವಿಧ ಕೊಡವ ನೃತ್ಯಗಳು ಹಾಗೂ ಕೊಡವ ಹಾಡು ಗ್ರಾಮದ ಗತಕಾಲದ ಮಂದ್ ನಮ್ಮೆಯ ಸಂಭ್ರಮ ನೆನಪಿಸುವಂತಿತ್ತು.

ಆರಂಭದಲ್ಲಿ ಮಂದ್‌ನ ಮಧ್ಯದಲ್ಲಿರುವ ಪುರಾತನ ಕಾಲದ ಅರಳಿ ಮರದ ಸುತ್ತ ಸಂಪ್ರದಾಯದಂತೆ ಊರ್ ಕೋಲ್ ಹೊಡೆದ ನಂತರ ಚೆಟ್ಟಂಗಡ ಕುಟುಂಬದ ಮಹಿಳೆಯರ ಉಮ್ಮತ್ತಾಟ್ ಪ್ರದರ್ಶನ ನಡೆಯಿತು. ನಂತರ ತಿಂಗಕೋರ್ ಮೊಟ್ಟ್ ತಲೆಕಾವೇರಿಕ್ ತಂಡದಿಂದ ಪುತ್ತರಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿಯ ಪ್ರದರ್ಶನ ನಡೆಯಿತು. ಇದರೊಂದಿಗೆ ಚೆಟ್ಟಂಗಡ ಲೇಖನ ಅಕ್ಕಮ್ಮಳಿಂದ ಕೊಡವ ಗೀತೆಗೆ ಭರತನಾಟ್ಯ ಹಾಗೂ ಕೊಡವ ಹಾಡು, ಪೆಮ್ಮಂಡ ದೀಪ್ತಿ ಹಾಗೂ ದೀಕ್ಷರವರಿಂದ ನೃತ್ಯ, ಪುಟಾಣಿ ಚೆಟ್ಟಂಗಡ ಜನ್ವಿಯ ನೃತ್ಯ ಮತ್ತು ಹಾಡು, ಹಾಗೂ ಚೆಟ್ಟಂಗಡ ರಮ ಉತ್ತಪ್ಪ ಹಾಡುಗಾರಿಕೆ ಜನರನ್ನು ರಂಜಿಸಿತು.

ಅರಳಿ ಮರದ ಸುತ್ತ ಆಕೀರಿ ಕೋಲ್ ಹೊಡೆದ ನಂತರ ಸಾಮೂಹಿಕ ಕೊಡವ ವಾಲಗತಾಟ್‌ನೊಂದಿಗೆ ಮಂದ್‌ನಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯಗೊಂಡಿತು.

ಅಧ್ಯಕ್ಷತೆ ವಹಿಸಿದ್ದ ನೆಮ್ಮಲೆ ಗ್ರಾಮ ದೇವಸ್ಥಾನ ಸಮಿತಿ ಅಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್ ಮಾತನಾಡಿ ಕೊಡವ ಸಂಸ್ಕೃತಿಯ ಮೂಲ ಬೇರಾದ ಜಾನಪದ ಕಲೆಯ ಉಳಿವಿಗಾಗಿ ಹಿರಿಯರು ಹಾಕಿಕೊಟ್ಟ ಅಡಿಪಾಯವನ್ನು ಗಟ್ಟಿಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಇಂತಹ ಮಂದ್ ನಮ್ಮೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ಸಹಕರಿಸಬೇಕು ಎಂದರು.

ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಸುರೇಂದ್ರ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದ ಕಲಾ ತಂಡಕ್ಕೆ ಮರ್ಯಾದಿ ಮೊದ ನೀಡಿದರು. ಗ್ರಾಮಾಭಿವೃದ್ದಿ ಸಮಿತಿ ಸದಸ್ಯರಾದ ಚೆಟ್ಟಂಗಡ ಉಲ್ಲಾಸ್, ಚೊಟ್ಟೆಯಾಂಡಮಾಡ ಉದಯ ಹಾಗೂ ಮೊಣ್ಣಪ್ಪ ಕೊದಿಮೊದ ವಿತರಿಸಿದರು. ಚೆಟ್ಟಂಗಡ ರಮಾ ಉತ್ತಪ್ಪ ಪ್ರಾರ್ಥಿಸಿ, ರವಿ ಸುಬ್ಬಯ್ಯ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ