ಕಾಂತಾರ-2 ಸಿನಿಮಾಗೆ ದೈವದ ಅಭಯ ಪಡೆದ ರಿಷಬ್‌ ಶೆಟ್ಟಿ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಮಂಗಳೂರು ಹೊರವಲಯದ ವಜ್ರದೇಹಿ ಮಠದಲ್ಲಿ ನಡೆದ ನೇಮೋತ್ಸವದಲ್ಲಿ ನಟ ರಿಷಬ್‌ ಶೆಟ್ಟಿ ಭಾಗಿಯಾಗಿ, ಕಾಂತಾರ ೨ ಯಶಸ್ಸಿಗಾಗಿ ದೈವದ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಂತಾರ-2 ಸಿನಿಮಾ ಚಿತ್ರೀಕರಣದ ಸಿದ್ಧತೆಯ ಬ್ಯೂಸಿ ನಡುವೆಯೇ ಚಿತ್ರನಿರ್ದೇಶಕ, ನಟ ರಿಷಬ್‌ ಶೆಟ್ಟಿ ಶುಕ್ರವಾರ ದಿಢೀರನೆ ಮಂಗಳೂರು ಹೊರವಲಯದ ಗುರುಪುರ ಶ್ರೀವಜ್ರದೇಹಿ ಮಠಕ್ಕೆ ಆಗಮಿಸಿ ಜಾತ್ರೋತ್ಸವದಲ್ಲಿ ದೈವದ ನೇಮೋತ್ಸವದಲ್ಲಿ ಭಾಗಿಯಾಗಿ ಅಭಯ ಪಡೆದಿದ್ದಾರೆ.

ಕಾಂತಾರ-2 ಚಿತ್ರೀಕರಣ ಕಾರಣ ಇನ್ನು ಒಂದು ವರ್ಷ ಎಲ್ಲಿಗೂ ಹೋಗುವುದಿಲ್ಲ ಎಂದಿದ್ದ ರಿಷಬ್ ಶೆಟ್ಟಿ ಈಗ ದಿಢೀರನೆ ನೇಮೋತ್ಸವಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ. ಮೂಲಗಳ ಪ್ರಕಾರ ರಿಷಬ್‌ ಶೆಟ್ಟಿ ಅವರು ವಜ್ರದೇಹಿ ಮಠದ ಸ್ವಾಮೀಜಿ ಅವರ ಆಹ್ವಾನದ ಮೇರೆಗೆ ಬಂದಿಲ್ಲ. ಚಿತ್ರೀಕರಣದ ಬಿಡುವಿಲ್ಲದ ಒತ್ತಡದ ನಡುವೆಯೂ ಅವರಾಗಿಯೇ ಬಂದಿದ್ದಾರೆ, ನೇಮೋತ್ಸವಕ್ಕೆ ಬರುವಂತೆ ದೈವ ಅವರಿಗೆ ಪ್ರೇರೇಪಣೆ ನೀಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನೇಮೋತ್ಸವಕ್ಕೆ ಆಗಮಿಸಿದ ರಿಷಬ್‌ ಶೆಟ್ಟಿ ಅವರು ಏನೂ ಹೇಳಿಲ್ಲ. ದೈವ ಪ್ರೇರಣೆಗೆ ಆಗಮನ: ಕಾಂತಾರ-1 ತೆರೆಗೆ ಬಂದು ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದರೂ ನಂತರದ ಬೆಳವಣಿಗೆಗಳು ತುಸು ಆತಂಕಕ್ಕೆ ಕಾರಣವಾಗಿದ್ದವು. ಈ ಸವಾಲು ಹಾಗೂ ತೊಂದರೆ ಕಾಂತಾರ-2 ಸಿನಿಮಾಗೆ ಬರಬಾರದು. ಅದಕ್ಕಾಗಿ ತೀರಾ ಎಚ್ಚರಿಕೆ ವಹಿಸಿ ಚಿತ್ರವನ್ನು ತೆರೆ ಮೇಲೆ ತರುವ ಬಗ್ಗೆ ರಿಷಬ್‌ ಶೆಟ್ಟಿ ಚಿಂತನೆ ನಡೆಸಿದ್ದಾರೆ. ಅದಕ್ಕಾಗಿ ಕಾರಣಿಕ ದೈವದ ಪ್ರೇರಣೆ ಹಾಗೂ ಅಭಯ ಪಡೆಯಲು ರಿಷಬ್‌ ಶೆಟ್ಟಿ ನೇರವಾಗಿ ವಜ್ರದೇಹಿ ಮಠಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಅಭಯ ನೀಡಿದ ದೈವ: ವಜ್ರದೇಹಿ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಕಾರಣಿಕ ಮೈಸಂದಾಯ ದೈವದ ನೇಮೋತ್ಸವದಲ್ಲಿ ಸ್ವತಃ ಭಾಗವಹಿಸಿದ ರಿಷಬ್‌ ಶೆಟ್ಟಿ ಅವರು ಕೈಮುಗಿದು ಅಂಜಲಿ ಬದ್ಧನಾಗಿ ನಿಂತಿದ್ದರು. ಅತ್ತಿತ್ತ ಕಣ್ಣಾಡಿಸದೆ ದೈವವನ್ನೇ ನೋಡುತ್ತಾ ನಿಂತಿದ್ದ ರಿಷಬ್ ಶೆಟ್ಟಿಗೆ ದೈವ ಅಭಯ ನೀಡಿದೆ. ಕಾಂತಾರ ಚಿತ್ರದಲ್ಲಿದ್ದಂತೆ ದೈವ ಕೂಡ ರಿಷಬ್‌ಗೆ ಆಶೀರ್ವಾದ ಮಾಡಿದೆ. ರಿಷಬ್‌ ಶೆಟ್ಟಿಯನ್ನು ಆಲಂಗಿಸಿದ ದೈವ, ಅವರ ಎರಡು ಕಣ್ಣಿನತ್ತ ಕೈಚಾಚಿ ಕುಗ್ಗಬೇಡ, ಮುನ್ನುಗ್ಗು, ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಕೈಸನ್ನೆ ಮೂಲಕ ಆಶೀರ್ವಾದ ಮಾಡಿದೆ.

ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ವೇಳೆ ರಿಷಬ್‌ ಶೆಟ್ಟಿ ಭೇಟಿಯ ರಹಸ್ಯ ಬಿಚ್ಚಿಟ್ಟ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ದೈವಾರಾಧನೆಗೆ ಅವಹೇಳನ ಆಗದಂತೆ ಕಾಂತಾರ-2 ಚಿತ್ರವನ್ನು ತೆರೆಗೆ ತರುವ ಯೋಚನೆ ಹೊಂದಿದ್ದಾರೆ. ಎಲ್ಲಿಯೂ ದೈವಾಚರಣೆಗೆ ಧಕ್ಕೆಯಾಗಬಾರದು. ದೈವಾರಾಧನೆಯ ಕಟ್ಟುಪಾಡು ಅಧ್ಯಯನ ಮಾಡಿಕೊಂಡು ದೈವದ ನೆಲೆಯನ್ನು ಅರಿತುಕೊಂಡು ಸಮಾಜಕ್ಕೆ ಅದನ್ನು ತೋರಿಸಬೇಕು ಎಂಬುದು ರಿಷಬ್ ಶೆಟ್ಟಿಯ ಇಚ್ಛೆ. ಇದರಿಂದಾಗಿ ಸತ್ಕರ್ಮ ಕಾಳಜಿ ಇರಿಸಿಕೊಂಡು ಮೈಸಂದಾಯ ನೇಮಕ್ಕೆ ಆಗಮಿಸಿದ್ದಾರೆ. ಬಹಳ ಪ್ರೀತಿಯಿಂದ ಈ ಸನ್ನಿಧಾನಕ್ಕೆ ಬಂದಿದ್ದಾರೆ. ಕಾಂತಾರ ಬಗ್ಗೆ ಮುಕ್ತವಾಗಿ ನನ್ನಲ್ಲಿ ಹಂಚಿಕೊಂಡಿದ್ದಾರೆ. ಪರಶುರಾಮನ ಸೃಷ್ಟಿ, ದೈವಗಳ ನೆಲೆ ಮತ್ತು ಕಾರ್ಣಿಕವನ್ನು ಜಗತ್ತಿಗೆ ಪರಿಚಯಿಸುವ ಇಚ್ಛೆಯನ್ನು ಹೊಂದಿದ್ದಾರೆ ಎಂದರು.

Share this article