ಕೊರಗ ತನಿಯ ದೈವದ ಹಾಗು ಮಂತ್ರವಾದಿ ಗುಳಿಗನ 84ನೇ ನೇಮೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು. ಭಂಡಾರ ಹೊರಡುವುದರ ಮೂಲಕ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 84 ನೇ ನೇಮೋತ್ಸವ ಶನಿವಾರ ಮತ್ತು ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಶನಿವಾರ ಆಯುಧಾ ಪೂಜೆ, ಸಂಜೆ ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು.
ಸಂಜೆ 7 ಗಂಟೆಯ ನಂತರ ಮಂತ್ರವಾದಿ ಗುಳಿಗನ ನೇಮ ನಡೆಯಿತು. ರಾತ್ರಿ ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು. ಭಾನುವಾರ ಮುಂಜಾನೆ ತಾವು ನಂಬಿದ ಕಾರಣಿಕ ದೈವಗಳಿಗೆ ಹರಕೆ ಮತ್ತು ಕಾಣಿಕೆ ಅರ್ಪಿಸಿದರು.
ಬೆಳಗ್ಗೆ 9 ಗಂಟೆಯ ನಂತರ ದೇವಾಲಯದ ಮತ್ತು ಭಕ್ತರ ಸೇರಿದಂತೆ ಮೂರು ಕೊರಗ ತನಿಯ ದೈವದ ಕಾರಣಿಕ ನೇಮೋತ್ಸವವು ನಡೆಯಿತು. ತಾನು ನಂಬಿದವರಿಗೆ ಇಂಬು ನೀಡುವೆ. ನನಗೆ ಮೋಸ ಮಾಡಿದರೆ ಕೆಲವೇ ದಿನದಲ್ಲಿ ತಪ್ಪಿನ ಮನವರಿಕೆ ಮಾಡಿಕೊಡುವೆ ಎಂದು ಕೊರಗಜ್ಜ ದೈವ ಅಭಯ ನೀಡಿತು.
ನಂತರ ಗಂಧಪ್ರಸಾದ ವಿತರಿಸಲಾಯಿತು. ರಾತ್ರಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕುಶಾಲನಗರ, ಮೈಸೂರು, ಮಂಗಳೂರು ಸೂಳ್ಯ, ಪುತ್ತೂರು, ಸಕಲೇಶಪುರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೇಮೋತ್ಸವ ವೀಕ್ಷಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.