ವಿಶೇಷ ವರದಿ
ಎಲ್ಲೆಡೆ ನೀರ ನೆಲೆಗಳೆಲ್ಲಾ ಬತ್ತಿ ಹೋಗಿ ಬರದ ಕಾವು ಕಾಡುತ್ತಿದ್ದರೆ, ಕಳೆದ ವರ್ಷ ಬತ್ತಿ ಹೋಗಿದ್ದ ನೇತ್ರಾವತಿ ನದಿಯ ಒಡಲು ಈ ಬೇಸಿಗೆಯಲ್ಲಿ ಜಲರಾಶಿಯಿಂದ ತುಂಬಿದೆ. ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾದ ಅಣೆಕಟ್ಟಿನಿಂದಾಗಿ ನಾಲ್ಕು ಮೀಟರ್ ಎತ್ತರದಲ್ಲಿ ಜಲ ರಾಶಿ ಸಂಗ್ರಹಗೊಂಡು ಉಪ್ಪಿನಂಗಡಿ ಪ್ರದೇಶದುದ್ದಕ್ಕೂ ಹಿನ್ನೀರು ಸಂಗ್ರಹಗೊಳ್ಳುವಂತಾಗಿ ನೀರಿನ ಕೊರತೆ ನೀಗಿಸಿದಂತಾಗಿದೆ.
ಕಳೆದ ವರ್ಷ ೨೦೨೩ ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಹರಿವು ನಿಂತು ಹೋಗಿ ಉಪ್ಪಿನಂಗಡಿ ಭಾಗದಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ನೇತ್ರಾವತಿ, ಮಳೆಗಾಲದಲ್ಲಿ ಕುಮಾರಧಾರೆ ಸಂಗಮಿಸಿದ ಬಳಿಕ ಮತ್ತೆ ಜೀವ ತಾಳಿ ಹರಿಯುತ್ತಿತ್ತು. ಆ ವೇಳೆ ಮಂಗಳೂರಿನ ಪರಿಸರದ ಪ್ರಿಯ ಸಂಘಟನೆಗಳು ಬತ್ತಿ ಹೋಗಿದ್ದ ನೇತ್ರಾವತಿ ನದಿಯ ಒಡಲಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿತ್ತು.ನದಿ ಬತ್ತಿ ಹೋಗಲು ಎತ್ತಿನಹೊಳೆ ಯೋಜನೆಯೇ ಕಾರಣವೆಂದು ಆಪಾದಿಸಿ ಎತ್ತಿನಹೊಳೆ ಯೋಜನೆಯ ಜನಕರಾದ ರಾಜಕೀಯ ನಾಯಕರ ಮುಖವಾಡ ಧರಿಸಿ ಕ್ರಿಕೆಟ್ ಆಟ ಆಡಲಾಗಿತ್ತು.
೨೦೨೩ ರ ಡಿಸೆಂಬರ್ ಆರಂಭದಿಂದಲೇ ಅಣೆಕಟ್ಟನ್ನು ಕಾರ್ಯಾಚರಣೆಗೆ ಒಳಪಡಿಸಲಾಗಿದ್ದು, ಒಟ್ಟು ೪ ಮೀಟರ್ ಎತ್ತರದ ಗೇಟು ಅಳವಡಿಸಲಾಗಿದೆ. ಮೊದಲ ಎರಡುವರೆ ತಿಂಗಳಲ್ಲಿ ನೀರಿನ ಹರಿವು ಇದ್ದು ಗೇಟು ದಾಟಿ ನೀರು ಹೊರಗೆ ಹರಿಯುತ್ತಿತ್ತು. ಪ್ರಸಕ್ತ ನಾಲ್ಕು ಮೀಟರ್ ಗೇಟಿನ ಮಿತಿಯಲ್ಲಿ ನೀರಿನ ಸಂಗ್ರಹವಿದೆ. ಹೊರ ಹರಿವು ನಿಂತಿದೆ.
ನೇತ್ರಾವತಿ ನದಿಯಲ್ಲಿ ೬ ಕಿ ಮೀ ವ್ಯಾಪ್ತಿಯುದ್ದಕ್ಕೂ ಅಣೆಕಟ್ಟಿನ ಹಿನ್ನೀರು ಸಂಗ್ರಹಗೊಂಡ ಪರಿಣಾಮ ನದಿಯ ಈ ಭಾಗದ ಸುತ್ತಮುತ್ತಲಿನ ಪರಿಸರದಾದ್ಯಂತ ಅಂತರ್ಜಲ ವೃದ್ಧಿಸಲ್ಪಟ್ಟಿದೆ. ಏಳೆಂಟು ಕಿ.ಮೀ. ದೂರದ ಕೃಷಿ ಪ್ರದೇಶದಲ್ಲಿ ನೀರಿಲ್ಲದೆ ಸೊರಗಿದ್ದ ಕೊಳವೆ ಬಾವಿಗಳಲ್ಲಿ , ಕೆರೆ ಬಾವಿಗಳಲ್ಲಿ ಈ ಬಾರಿ ನೀರು ಯಥೇಚ್ಛ ಸಂಗ್ರಹಣೆಗೊಂಡು ಕೃಷಿಕರ ಮನದಲ್ಲಿ ಸಂತಸ ಮೂಡಿದೆ. ಎಲ್ಲೆಡೆ ನೀರಿಲ್ಲದೆ ಬವಣೆ ಪಡುವ ವ್ಯಥೆಯ ಕಥೆಗಳೇ ಕೇಳಿ ಬರುತ್ತಿರುವ ಸಂಧರ್ಭದಲ್ಲಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಈ ಮೂರು ತಾಲೂಕಿನ ಹಲವು ಗ್ರಾಮಗಳು ಜಲರಾಶಿಯ ಪ್ರಯೋಜನ ಪಡೆಯುತ್ತಿವೆ.
ಈ ಹಿಂದಿನ ಯಾವುದೇ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳದ ಕಾಡಾನೆಗಳು ಈ ಬಾರಿ ನೇತ್ರಾವತಿ ನದಿಯ ಅಂಚಿನಲ್ಲಿ ನಿರಂತರ ಕಾಣಿಸತೊಡಗಿವೆ. ಸುಡುವ ಬಿಸಿಲ ಝಳದ ನಡುವೆ ದಾಹ ತೀರಿಸಲು ನೇತ್ರಾವತಿ ಒಡಲಿನಲ್ಲಿ ಯಥೇಚ್ಛವಾಗಿರುವ ನೀರನ್ನು ಆಶ್ರಯಿಸಿ ಕಾಡಾನೆ ಸಹಿತ ಕಾಡು ಪ್ರಾಣಿಗಳು ಈ ಪ್ರದೇಶದಲ್ಲಿ ಆಗಾಗ ಕಾಣಲಾರಂಭಿಸಿದೆ. ಕೆಲ ದಿನಗಳಿಂದ ಮೊಗ್ರು, ಬಂದಾರು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಾಡಾನೆ ನದಿ ನೀರಿನಲ್ಲಿ ನೀರಾಟವಾಡುತ್ತಿದ್ದ ದೃಶ್ಯಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ. ನೇತ್ರಾವತಿ ನದಿಯ ಉಪ ನದಿಗಳು ಬತ್ತುತ್ತಿದ್ದರೂ ನೇತ್ರಾವತಿ ಈ ಭಾಗದಲ್ಲಿ ತನ್ನ ಒಡಲಿನಲ್ಲಿ ಮೈ ತುಂಬಾ ಜಲಸಿರಿಯನ್ನು ಹೊಂದಿರುವುದು ಕಾಡುಪ್ರಾಣಿಗಳಿಗೂ ಅನುಕೂಲ ಕಲ್ಪಿಸಿದೆ.
ಶತಮಾನಗಳಿಂದ ಪೂಜಿಸಿಕೊಂಡು ಬರಲಾಗುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವಲಿಂಗಕ್ಕೆ ಈ ಬಾರಿ ಹಿನ್ನೀರು ನದಿಯಲ್ಲಿ ಆವರಿಸಿಕೊಂಡಿರುವ ಕಾರಣ ನೇರವಾಗಿ ಪೂಜೆ ಸಲ್ಲಿಸಲಾಗಲಿಲ್ಲ. ಆದರೆ ಜಲಾಧಿವಾಸ ಸ್ಥಿತಿಯಲ್ಲಿಯೇ ಮಳೆಗಾಲದಲ್ಲಿ ಸಲ್ಲಿಸಲಾಗುತ್ತಿದ್ದ ಪೂಜೆಯ ಕ್ರಮವನ್ನೇ ಈ ಬಾರಿ ವರ್ಷದುದ್ದಕ್ಕೂ ಅನುಷ್ಠಾನಿಸಲಾಗಿದೆ.