ದಾವಣಗೆರೆ: ಮಹಿಳೆ ಮತ್ತು ಮಕ್ಕಳ ಮೇಲೆ ದಾಳಿ ತಪ್ಪಿಸಲು ಹಾಗೂ ನಾಯಿಗಳು ಹೆಚ್ಚಾಗದಂತೆ ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ಸಂತತಿ ಹೆಚ್ಚಳವಾಗದಂತೆ ಲಸಿಕೆ ಹಾಕುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ನಾಯಿ ಕಚ್ಚಿದಾಗ ಲಸಿಕೆ ನೀಡಲು ಸಾರ್ವಜನಿಕರಿಗೆ ಸಹಾಯವಾಗುವಂತೆ 108 ಇಲ್ಲವೇ 1098 ಸಹಾಯವಾಣಿ ರಚನೆ ಮಾಡಬೇಕು. ಕರೆ ಬಂದ ಕೂಡಲೇ ಸಂತ್ರಸ್ತರ ಮನೆಗೆ ತೆರಳಿ ಅಗತ್ಯ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಬೀದಿನಾಯಿ, ಸಾಕು ನಾಯಿಗಳಿಗೆ ಎಆರ್‌ಯು ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು. ಮನೆ ಮನೆಗೆ ತೆರಳಿ ಸಾಕು ಪ್ರಾಣಿಗಳಿಗೆ ವ್ಯಾಕ್ಸಿನ್ ನೀಡಬೇಕು. ಎಬಿಸಿ ಕಾರ್ಯಕ್ರಮ ಮಾಡಲು ನಗರಾಭಿವೃದ್ಧಿ ಕೋಶ, ಪಾಲಿಕೆ ಸಂಬಂಧಿಸಿದ ಟೆಂಡರ್ ಮೂಲಕ ಸಂಸ್ಥೆಗಳನ್ನು ಗುರುತಿಸಿ ಎಲ್ಲ ನಾಯಿಗಳಿಗೆ ಪಶುಪಾಲನಾ ಸಹಯೋಗದೊಂದಿಗೆ ಸಂತಾನಹರಣ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಗಂಭೀರ ಅನಾರೋಗ್ಯ ಅಥವಾ ಮಾರಣಾಂತಿಕವಾಗಿ ಗಾಯಗೊಂಡ ಅಥವಾ ಹುಚ್ಚುರೋಗಪೀಡಿತ ನಾಯಿಗಳಿಗೆ ಸೋಡಿಯಂ ಪೆಂಟಾಥಾಲ್ ಬಳಸಿ, ನೋವುರಹಿತ ವಿಧಾನದಲ್ಲಿ ದಯಾಮರಣ ನೀಡಬೇಕು. ಬೇರೆ ಯಾವುದೇ ವಿಧಾನ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿ ಪ್ರಾಣಿಯನ್ನು ದಯಾಮರಣಕ್ಕೆ ಒಳಪಡಿಸಲು ಲಿಖಿತವಾಗಿ ಕಾರಣಗಳನ್ನು ದಾಖಲಿಸಬೇಕು ಎಂದರು.ಜಿಲ್ಲೆಯಲ್ಲಿರುವ ಎಲ್ಲ ನಾಯಿಗಳಿಗೆ ಉಚಿತ ಲಸಿಕೆ ಹಾಕಲು ಸೆ.28 ರಿಂದ ಅ.27ರವರೆಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಾಲೆಗಳಲ್ಲಿ ಪಶುಪಾಲನಾ ಇಲಾಖೆಯಿಂದ ರೇಬಿಸ್ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದರು.
- - -
-10ಕೆಡಿವಿಜಿ45: