ಕಾವೇರಿ ಆರತಿ ನಿಲ್ಲಿಸಲು ಅಸಾಧ್ಯ: ಡಿಕೆಶಿ

KannadaprabhaNewsNetwork |  
Published : Sep 15, 2025, 01:00 AM IST
ಜಲಪಾತೋತ್ಸವದ ಸಮಾರೋಪ ಸಮಾರಂಭ | Kannada Prabha

ಸಾರಾಂಶ

ಪ್ರಕೃತಿಗೆ ಪೂಜೆ ಸಲ್ಲಿಸುವುದು ನಮ್ಮ ಸಂಸ್ಕೃತಿ. ಕಾವೇರಿ ಆರತಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ (ಮಂಡ್ಯ)

ಪ್ರಕೃತಿಗೆ ಪೂಜೆ ಸಲ್ಲಿಸುವುದು ನಮ್ಮ ಸಂಸ್ಕೃತಿ. ಕಾವೇರಿ ಆರತಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿಯಲ್ಲಿ 2 ದಿನಗಳ ಕಾಲ ನಡೆದ ಜಲಪಾತೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾವೇರಿ ಆರತಿ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಇದರ ಯೋಜನೆ ತಯಾರಾಗುತ್ತಿದೆ. ಕೆಲ ರೈತಸಂಘಗಳು ಈ ಆಚರಣೆಗೆ ವಿರೋಧ ಮಾಡಿ ನ್ಯಾಯಾಲಯಕ್ಕೂ ಹೋಗಿದ್ದಾರೆ. ಆದರೆ, ಪ್ರಕೃತಿ ಮಾತೆಗೆ ಪೂಜೆ, ಆರತಿ ಮಾಡಲು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕಾವೇರಿ ನಮ್ಮೆಲ್ಲರ ಪುಣ್ಯ ಮಾತೆ. ಅನ್ನ, ಜನ್ಮ, ಬದುಕು ನೀಡಿದ್ದಾಳೆ. ಕೊಡಗಿನಿಂದ ಹರಿದು ಅರಬ್ಬಿ ಸಮುದ್ರದವರೆಗೂ ಎಲ್ಲರ ಬದುಕು, ಕುಡಿಯುವ ನೀರು, ವ್ಯವಸಾಯ, ವಿದ್ಯುತ್‌ ಉತ್ಪಾದನೆ, ಮೀನುಗಾರಿಕೆ ಸೇರಿ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾಳೆ ಎಂದು ಹೇಳಿದರು.

ಮಳವಳ್ಳಿಯಲ್ಲಿ ಕಾವೇರಿ ನೀರು 300 ಅಡಿ ಎತ್ತರದಿಂದ ಬೀಳುತ್ತಿದೆ. ರಾಜ್ಯದಲ್ಲಿ 544 ಚಿಕ್ಕ ಹಾಗೂ ದೊಡ್ಡ ಜಲಪಾತಗಳಿವೆ. ಶಿವಮೊಗ್ಗದಲ್ಲಿ ಬಹಳ ಎತ್ತರದ ಜಲಪಾತ ಇದೆ. ಪ್ರಕೃತಿಯ ವೈಭವ ಕಣ್ತುಂಬಿಕೊಂಡು ಪೂಜಿಸಿದರೆ ನಮ್ಮ ಸಂಸ್ಕೃತಿ ಉಳಿವಿಗೆ ಶಕ್ತಿ ನೀಡಿದಂತಾಗುತ್ತದೆ ಎಂದರು.

ಮನುಷ್ಯನಿಗೆ ಅಮೂಲ್ಯ ವಸ್ತು ಒಳ್ಳೆಯ ಮನಸ್ಸು. ಸ್ವಾರ್ಥಕ್ಕಿಂತ ಹೆಚ್ಚು ಮೌಲ್ಯ ತ್ಯಾಗಕ್ಕಿದೆ. ಈ ಸರ್ಕಾರದ ಮೇಲೆ ನಂಬಿಕೆ ಇಟ್ಟುಕೊಂಡು 2028ಕ್ಕೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು. ನಿಮ್ಮ ಜೊತೆ ನಾವಿರುತ್ತೇವೆ ಎಂದು ತಿಳಿಸಿದರು.‌

ರಾಜ್ಯದ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರವಾಸೋದ್ಯಮಗಳಲ್ಲಿ ಇದುವರೆಗೂ 1.50 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. ರೈತರು, ವಿದ್ಯಾಥಿಗಳು, ಯುವಕರು ಪ್ರವಾಸಿ ತಾಣಗಳಿಗೆ ಬರಬೇಕು. ಐಸಿಹಾಸಿಕ ಜಾಗಗಳನ್ನು ವೀಕ್ಷಣೆ ಮಾಡಬೇಕು. ಅದಕ್ಕಾಗಿ ಪ್ರವಾಸೋದ್ಯಮ, ಶಿಕ್ಷಣ, ಪ್ರಾಥಮಿಕ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಿ, ಪ್ರವಾಸಿ ತಾಣಗಳ ವೀಕ್ಷಣೆಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಮೈಸೂರಿನ ಎಚ್.ಡಿ.ಕೋಟೆಯ ಕಬಿನಿ ಡ್ಯಾಂ, ಪ್ರಾಣಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಈ ಹಿಂದೆ ಕಾಕನಕೋಟೆಯಲ್ಲಿ ಆನೆಗಳನ್ನು ಹಿಡಿದು ವಿಶೇಷವಾದ ಅಧ್ಯಯನ ಮಾಡಲಾಗಿದೆ. ಪ್ರವಾಸೋದ್ಯಮದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.ಗಗನಚುಕ್ಕಿ ದೇಶದಲ್ಲಿ ಗುರುತಿಸಿಕೊಳ್ಳಬೇಕು:ಮೇಕೆದಾಟು ಯೋಜನೆ ಜಾರಿಗೆ ತರಲು ಹೋರಾಟ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ದೊಡ್ಡ ಜಲಪಾತದ ಜಾಗವಾಗಿ ಗಗನಚುಕ್ಕಿ ಗುರುತಿಸಿಕೊಳ್ಳಬೇಕು. 1904ರಲ್ಲಿ ಇಲ್ಲಿಂದಲೇ ಕೆಜಿಎಫ್‌ಗೆ ವಿದ್ಯುತ್‌ಚ್ಛಕ್ತಿ ತೆಗೆದುಕೊಂಡು ಹೋಗಲು ವಿದ್ಯುತ್‌ ಉತ್ಪಾದನೆ ಪ್ರಾರಂಭ ಮಾಡಲಾಯಿತು. ಮೊದಲ ದೀಪ ಇಲ್ಲಿಯೇ ಉರಿಯಿತು. ನಂತರ ಮೈಸೂರು, ಬೆಂಗಳೂರಿಗೂ ಬಂದಿತು ಎಂದರು.ಕರೆಂಟ್‌ ಇಲ್ಲದಿದ್ದರೆ ನಮ್ಮ ಬದುಕು ಏನಾಗುತ್ತಿತ್ತು. ಇಡೀ ಏಷ್ಯಾಗೆ ಕರೆಂಟ್‌ ಕೊಟ್ಟ ಪುಣ್ಯ ಭೂಮಿ ಇದು. ಸಿಂಗಾಪುರ್‌, ಚೈನಾ, ದೆಹಲಿ, ಪಾಕಿಸ್ತಾನ, ಮಲೇಷ್ಯಾದಲ್ಲಿ ಎಲ್ಲೂ ಕರೆಂಟ್ ಇರಲಿಲ್ಲ ಎಂದು ಇತಿಹಾಸ ಮೆಲುಕು ಹಾಕಿದರು.ಧಾಮಿಕ, ಶೈಕ್ಷಣಿಕ, ಕಲೆ, ಜಾನಪದ, ಸಾಹಿತ್ಯ, ಚಿತ್ರಕಲೆ ಎಲ್ಲದಕ್ಕೂ ರಾಜ್ಯ ಮಾದರಿಯಾಗಿದೆ. ದೇಶದಲ್ಲೇ ದೊಡ್ಡ ಸಂಪತ್ತಿರುವ ರಾಜ್ಯ ಕರ್ನಾಟಕ. ಕನ್ನಂಬಾಡಿ, ವಿದ್ಯುತ್‌ ಉತ್ಪಾದನಾ ಕೇಂದ್ರದಲ್ಲೂ ದೇಶಕ್ಕೆ ಮಾದರಿಯಾಗಿದೆ ಎಂದರು.ರಾಜ್ಯದ ಎಲ್ಲರ ಬದುಕಿಗೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಸರ್ಕಾರ ವಿರೋಧಿಗಳ ಬಾಯಿ ಮುಚ್ಚಿಸಿದೆ. ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆ ನಡುವೆ ಮುಂದೆಯೂ ಸರ್ಕಾರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದು ತಿಳಿಸಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ