- ಹರಿಹರದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಎನ್.
- - -ಕನ್ನಡಪ್ರಭ ವಾರ್ತೆ ಹರಿಹರ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಿಸಿ, ಅವುಗಳನ್ನು ಜನವಸತಿ ಇಲ್ಲದ ಪ್ರದೇಶದಲ್ಲಿ ಇಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಎನ್. ಹೇಳಿದರು.ಮಂಗಳವಾರ ಬೀದಿನಾಯಿಗಳನ್ನು ಸೆರೆಹಿಡಿದ ನಂತರ ಅವುಗಳನ್ನು ಸಾಕುವ ಸ್ಥಳ ಪರಿಶೀಲನೆಗಾಗಿ ಪಶುಪಾಲನಾ ಇಲಾಖೆ ಅಧಿಕಾರಿಗಳಿಗಳೊಂದಿಗೆ ನಗರಕ್ಕೆ ಆಗಮಿಸಿದ್ದ, ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ಬೀದಿನಾಯಿಗಳಿಂದ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ. ನಾಯಿ ಕಡಿತದಿಂದ ಸಾವಾದರೆ ₹೫ ಲಕ್ಷ ಪರಿಹಾರ ಕೊಡಬೇಕೆಂಬ ನಿಯಮವಿದೆ. ಪರಿಹಾರ ಕೊಡುವುದು ಮುಖ್ಯವಲ್ಲ. ಆದರೆ ಜನರ ಪ್ರಾಣಹಾನಿ ಆಗಬಾರದು ಎಂಬುದೇ ಮುಖ್ಯ ಎಂದರು.ನಗರದ ಎರಡು ಮೂರು ಸ್ಥಳಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಯಾವುದು ಸೂಕ್ತವಾಗುತ್ತದೆ ಎಂಬುದನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವವರಿಗೆ ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದರು.
ನಗರದಲ್ಲಿರುವ ಶಾಲಾ, ಕಾಲೇಜು, ಹಾಸ್ಟೆಲ್, ಸರ್ಕಾರಿ ಕಚೇರಿ ಹಾಗೂ ಇತರೆ ಸಾರ್ವಜನಿಕ ಸಂಸ್ಥೆಗಳಲ್ಲಿ ಆ ಭಾಗದಲ್ಲಿರುವ ಬೀದಿನಾಯಿಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಆಯಾ ಸಂಸ್ಥೆಗಳ ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದರು.ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಮಹೇಶ್ ಮಾತನಾಡಿ, ರೇಬಿಸ್ ಕಾಯಿಲೆ ಇರುವ ನಾಯಿ ಕಚ್ಚಿದರೆ ತಕ್ಷಣ ನಾಯಿ ಕಚ್ಚಿದ ಜಾಗವನ್ನು ಸೋಪಿನಿಂದ ಚೆನ್ನಾಗಿ ನೀರು ಹಾಕಿ ತೊಳೆಯಬೇಕು. ಅನಂತರ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ರೇಬಿಸ್ ಕಾಯಿಲೆ ಇರುವ ನಾಯಿ ಕಚ್ಚಿದಾಗ ನಿರ್ಲಕ್ಷ್ಯ ವಹಿಸಿದರೆ, ಸಾವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದರು.
ಸ್ಥಗಿತಗೊಂಡಿರುವ ನಗರಸಭೆ ವ್ಯಾಪ್ತಿಯ ನೂತನ ನಗರಸಭೆ ಕಟ್ಟಡ ಕಾಮಗಾರಿ ಬೇಗನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ಮುಂದಿನ ೬ ತಿಂಗಳ ಒಳಗೆ ನೂತನ ಕಚೇರಿಯ ಉದ್ಘಾಟನೆ ಮಾಡಬೇಕಿದೆ. ನಗರಸಭೆಯಲ್ಲಿನ ಸಿಬ್ಬಂದಿ ಕೊರತೆ ಸಮಸ್ಯೆ ಪರಿಹರಿಸಲು ಆಧ್ಯತೆ ನೀಡಲಾಗಿದೆ, ಸರ್ವರ್ ಸಮಸ್ಯೆ ಎರಡು ದಿನಗಳಲ್ಲಿ ಬಗೆಹರಿಯಲಿದೆ ಎಂದು ಮಹಾಂತೇಶ್ ಪ್ರಶ್ನೆಗೆ ಉತ್ತರಿಸಿದರು.ಈ ಸಂದರ್ಭ ಪೌರಾಯುಕ್ತ ಎಂ.ಪಿ.ನಾಗಣ್ಣ, ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ಬಿ.ಏಕನಾಥ್ ಹಾಗೂ ಇತರರು ಇದ್ದರು.
- - --02HRR.02:
ಹರಿಹರದಲ್ಲಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡುವ ಸ್ಥಳ ನಿಗದಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಎನ್. ಎಪಿಎಂಸಿ ಗೋದಾಮನ್ನು ಪರಿಶೀಲಿಸಿದರು. ಪಶುಪಾಲನಾ ಉಪ ನಿರ್ದೇಶಕ ಡಾ.ಮಹೇಶ್, ಪೌರಾಯುಕ್ತ ಎಂ.ಪಿ.ನಾಗಣ್ಣ ಹಾಗೀ ಸಿಬ್ಬಂದಿ ಇದ್ದರು.