ಪೊಲೀಸರ ತ್ಯಾಗ, ಬಲಿದಾನ ಎಂದಿಗೂ ಸ್ಮರಿಸಿ

KannadaprabhaNewsNetwork |  
Published : Oct 22, 2025, 01:03 AM IST
21ಡಿಡಬ್ಲೂಡಿ1ಜಿಲ್ಲಾ ಪೊಲೀಸ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಪೊಲೀಸ ಹುತಾತ್ಮರ ದಿನಾಚರಣೆಯಲ್ಲಿ ಎಸ್ಪಿ ಗುಂಜನ್ ಆರ್ಯ ಹುತಾತ್ಮರ ಪೊಲೀಸ ಸ್ಮಾರಕಕ್ಕೆ ಪುಷ್ಪ ಚಕ್ರ (ರೀತ್) ಸಮರ್ಪಿಸಿದರು | Kannada Prabha

ಸಾರಾಂಶ

ನಾಗರಿಕ ಹಕ್ಕುಗಳನ್ನು ಕಾಪಾಡಲು ತಮ್ಮನ್ನು ಕರ್ತವ್ಯದ ಮೂಲಕ ಅರ್ಪಿಸಿಕೊಂಡಿರುವ ಆರಕ್ಷಕರನ್ನು ಯಾವಾಗಲೂ ನಾವು ಗೌರವ, ಹೆಮ್ಮೆಯಿಂದ ಕಾಣಬೇಕು. ಸಮಾಜದಲ್ಲಿ ಮತ್ತು ಸರ್ಕಾರದ ಆಡಳಿತದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ ವ್ಯವಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಧಾರವಾಡ:

ಆಡಳಿತದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ ವ್ಯವಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪೊಲೀಸ್‌ ಅಧಿಕಾರಿ, ಸಿಬ್ಬಂದಿ ತ್ಯಾಗ, ಬಲಿದಾನವನ್ನು ಸ್ಮರಿಸುವುದು ಮತ್ತು ಹುತಾತ್ಮರಾದ ಪೊಲೀಸ್‌ ಸಿಬ್ಬಂದಿ ಕುಟುಂಬಗಳಿಗೆ ಬೆಂಬಲ, ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿ, ನಾಗರಿಕ ಹಕ್ಕುಗಳನ್ನು ಕಾಪಾಡಲು ತಮ್ಮನ್ನು ಕರ್ತವ್ಯದ ಮೂಲಕ ಅರ್ಪಿಸಿಕೊಂಡಿರುವ ಆರಕ್ಷಕರನ್ನು ಯಾವಾಗಲೂ ನಾವು ಗೌರವ, ಹೆಮ್ಮೆಯಿಂದ ಕಾಣಬೇಕು. ಸಮಾಜದಲ್ಲಿ ಮತ್ತು ಸರ್ಕಾರದ ಆಡಳಿತದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ ವ್ಯವಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.

ಸಮಾಜದ ಸಂರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡುವ ಹಾಗೂ ದೈಹಿಕವಾಗಿ ಊನರಾಗುವ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ, ಅವರ ಕುಟುಂಬಗಳಿಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದರು.

ಪೊಲೀಸ್‌ ವ್ಯವಸ್ಯೆ ಸುಧಾರಣೆಗೆ, ಮೂಲಸೌಕರ್ಯ, ಸೌಲಭ್ಯಗಳ ಪೂರೈಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅನೇಕ ಸಮಿತಿಗಳು ಈ ಕುರಿತು ವರದಿ ಸಲ್ಲಿಸಿವೆ. ಸರ್ಕಾರ ಸದಾ ಕಾಲ ಪೊಲೀಸರೊಂದಿಗೆ, ಇಲಾಖೆಯೊಂದಿಗೆ ಇರುತ್ತದೆ ಎಂದರು.

ಪೊಲೀಸ್‌ ಕುಟುಂಬಕ್ಕೆ ನಾವು ನೀಡುವ ಸಹಕಾರ, ಬೆಂಬಲ, ಪ್ರೇರಣೆ, ಪ್ರೋತ್ಸಾಹಗಳಿಂದ ಪೊಲೀಸರು ನೆಮ್ಮದಿಯಿಂದ, ತೃಪ್ತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಪೊಲೀಸ್‌ ಇಲಾಖೆಗೆ ಸರ್ಕಾರದಿಂದ ಎಲ್ಲ ಹಂತದ ತರಬೇತಿ, ಆಧುನಿಕ ಸೌಲಭ್ಯ ದೊರಕಿಸಲಾಗುತ್ತಿದೆ. ಪೊಲೀಸ್‌ ವ್ಯವಸ್ಥೆಯ ಆಧುನೀಕರಣವೂ ಅಗತ್ಯವಿದೆ ಎಂದರು.

ವಿಶೇಷ ಆಹ್ವಾನಿತರಾಗಿದ್ದ ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ಎಲ್ಲ ನಾಗರಿಕರ ಜವಾಬ್ದಾರಿ ಆಗಿದೆ. ಸಮಾಜದ ರಕ್ಷಣೆ, ಶಾಂತಿ ಕಾಪಾಡುವುದು ಬರೀ ಪೊಲೀಸ್‌ ಅಧಿಕಾರಿಗಳ, ಸಿಬ್ಬಂದಿ ಹೊಣೆಗಾರಿಕೆ ಆಗಬಾರದು ಎಂದರು. ಅವರ ನಿರಂತರ ಕಾವಲಿನಲ್ಲಿ ನಾವು ನೆಮ್ಮದಿಯಿಂದ ಇರಲು ಸಾಧ್ಯ. ದೇಶದ ಆಂತರಿಕ ಭದ್ರತೆಗೆ ಕಾರಣರಾದವರನ್ನು ನಾವು ಅಭಿಮಾನ, ಗೌರವದಿಂದ ಕಾಣಬೇಕು ಎಂದು ಪ್ರೊ. ವೆಂಕಪ್ಪಯ್ಯ ದೇಸಾಯಿ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್‌ ಹುತಾತ್ಮರ ನಾಮಸ್ಮರಣೆ ಮಾಡಿದರು. ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲ ಎಂ.ಎಂ. ಯಾದವಾಡ, ಸಿಇಎನ್ ಡಿಎಸ್ಪಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿಎಸ್ಪಿ ವಿನೋದ ಮುಕ್ತೇದಾರ, ಡಿಎಆರ್ ಡಿಎಸಪಿ ಡಿ.ಎಸ್. ಧನಗರ, ಲೋಕಾಯುಕ್ತ ಪೊಲೀಸ್‌ ಉಪ ಅಧೀಕ್ಷಕ ವೆಂಕನಗೌಡ ಪಾಟೀಲ, ಐಎಸ್‌ಡಿ ಘಟಕದ ಡಿಎಸ್‌ಪಿ ವೇಣುಗೋಪಾಲ, ಜಿಲ್ಲಾ ಪೊಲೀಸ್‌ ಕಚೇರಿಯ ಸಹಾಯಕ ಆಡಾಳಿತಾಧಿಕಾರಿ ಎಂ.ಎಸ್. ಹಿರೇಮಠ ಹಾಗೂ ವಿವಿಧ ಪೊಲೀಸ್‌ ಠಾಣೆಗಳ ಸಿಪಿಐ, ಪಿಎಸ್ಐಗಳಿದ್ದರು.

ಹುತಾತ್ಮರ ಪೊಲೀಸ್‌ ಸ್ಮಾರಕಕ್ಕೆ ಪುಷ್ಪ ಚಕ್ರ (ರೀತ್) ಸಮರ್ಪಿಸಿದರು. ಪರೇಡ್ ಕಮಾಂಡರ್ ವಿಠ್ಠಲ ಆರೇರ ನೇತೃತ್ವದಲ್ಲಿ ಎಸ್. ಕುರಗೋಡ ಮತ್ತು ಜಿ.ಎಲ್. ಜಂಜೂರಿ ಅವರ ಡಿಎಆರ್ ಪೊಲೀಸ್‌ ತಂಡಗಳಿಂದ ಗೌರವ ಸಮರ್ಪಣೆ ಮಾಡಲಾಯಿತು. ಎ.ಎಫ್‌. ಜಿಲ್ಲೇನವರ ಹಾಗೂ ವೈ.ಎಂ. ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ