ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇದು ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆದ ವೇಳೆ ವಿದೇಶಾಂಗ ಸಚಿವ ಜೈ ಶಂಕರ ಹೇಳಿದ ಮಾತು.
ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಕೇಳಿದಳು. ಇದಕ್ಕೆ ನಿಮಗೆ ಕೇಳಲು ಎಷ್ಟು ಸಮಯವಿದೆ ಎಂದು ನಗುತ್ತಲೇ ತಮ್ಮ ಮಾತನ್ನು ಆರಂಭಿಸಿದರು.ಅವರ ಕಾರ್ಯವೈಖರಿ ಬಗ್ಗೆ ಹೇಳಬೇಕೆಂದರೆ ಸಮಯವೇ ಸಾಕಾಗುವುದಿಲ್ಲ. ನಾನು 40 ವರ್ಷಗಳ ಕಾಲ ವಿದೇಶಾಂಗ ಸಚಿವಾಲಯದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಇದೀಗ ಸಚಿವನಾಗಿದ್ದೇನೆ. ಆದರೆ ಇಷ್ಟೊಂದು ಕೆಲಸ ಮಾಡುವ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ ಎಂದರು. ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡುವಾಗಲೂ ವಿಮಾನದಲ್ಲೇ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದನ್ನು ಕಂಡಿದ್ದೇನೆ ಎಂದು ನುಡಿದರು.
ಮತ್ತೊಬ್ಬ ವಿದ್ಯಾರ್ಥಿನಿಯೊಬ್ಬಳು ದೇಶದ ಬಡತನದ ಸೂಚ್ಯಂಕ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಕಡಿಮೆ ಇದೆಯಲ್ಲ ಎಂದು ಪ್ರಶ್ನಿಸಿದಳು. ಇದಕ್ಕೆ ಉತ್ತರಿಸಿದ ಅವರು, ಅಧ್ಯಯನ ವರದಿಗಳನ್ನು ಲೆಕ್ಕಾಚಾರ ಒಮ್ಮೊಮ್ಮೆ ಗೊತ್ತಾಗುವುದಿಲ್ಲ. ಇನ್ನೊಂದು ವರದಿಯಲ್ಲಿ ಪಾಕಿಸ್ತಾನದಲ್ಲಿನ ಪ್ರೆಸ್ ಫ್ರೀಡಂಗಿಂತ ಭಾರತದ ಫ್ರೀಡಂ ಕಡಿಮೆ ಎಂದು ಹೇಳಿತ್ತು. ಇದನ್ನು ನಾವು ನಂಬಲು ಸಾಧ್ಯವಾ? ಎಂದು ಉತ್ತರಿಸಿದರು ಅಲ್ಲದೇ, ದೇಶದಲ್ಲಿ ಆಹಾರ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ನಾವೇ ಬೇರೆ ಬೇರೆ ದೇಶಗಳಿಗೆ ಆಹಾರ ರಫ್ತು ಮಾಡುತ್ತಿದ್ದೇವೆ. ಹೀಗಿದ್ದರೂ ನೆರೆ ಹೊರೆ ದೇಶದಲ್ಲಿನ ಬಡತನ ರೇಖೆಗಿಂತ ಭಾರತ ಅದ್ಹೇಗೆ ಬಡತನದ ರೇಖೆಯಲ್ಲಿ ಕೆಳಗಿರಲು ಸಾಧ್ಯ ಎಂದು ಪ್ರಶ್ನಿಸಿದರು.