ಪ್ರಶಸ್ತಿ, ಪುರಸ್ಕಾರಕ್ಕೆ ಕೆಲಸ ಮಾಡಿಲ್ಲ: ಡಾ.ಬಸವಲಿಂಗ ಪಟ್ಟದ್ದೇವರು

KannadaprabhaNewsNetwork | Published : Jan 15, 2024 1:47 AM

ಸಾರಾಂಶ

ಭಾಲ್ಕಿಯ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಕಾಣಿಕೆಯ 25 ಲಕ್ಷ ರು. ಚೆಕ್‌ ಹಿಂತಿರುಗಿಸಿದ ಪೂಜ್ಯರು । ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ವತಿಯಿಂದ ಭಾನುವಾರ ಗುರುಕುಲದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರ ಗುರುವಂದನಾ ಸಂಭ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಡಾ. ಚನ್ನಬಸವ ಪಟ್ಟದ್ದೇವರು ತೋರಿದ ಮಾರ್ಗದಲ್ಲಿ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದೇನೆ. ಎಂದಿಗೂ ಪ್ರಶಸ್ತಿ, ಪುರಸ್ಕಾರ ಆಸೆಗಾಗಿ ಕೆಲಸ ಮಾಡಿಲ್ಲ. ಸದ್ದು ಗದ್ದಲ ಇಲ್ಲದೇ ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ನಾಡೋಜ ಪುರಸ್ಕೃತ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನನ್ನ ಅಳಿಲು ಸೇವೆಗೆ ಸರ್ಕಾರ, ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ. ಇದೀಗ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿ ನೀಡಿ ಗೌರವಿಸಿದೆ. ವೈಯಕ್ತಿಕವಾಗಿ ನನಗೆ ಏನೇ ಪ್ರಶಸ್ತಿ, ಪುರಸ್ಕಾರ ಬಂದರೂ ಅದು ಭಕ್ತರಿಗೆ ಸಮರ್ಪಣೆ ಆಗುತ್ತದೆ ಎಂದರು.

ನಾನು ಮಠಕ್ಕೆ ಸ್ವಾಮೀಜಿ ಆಗಬೇಕೆಂದು ಬಂದವನಲ್ಲ. ವಿದ್ಯಾಭ್ಯಾಸಕ್ಕೆ ಮಠಕ್ಕೆ ಬಂದ ನನ್ನಲ್ಲಿನ ಆಧ್ಯಾತ್ಮದ ಹಸಿವು ಗುರುತಿಸಿ ಡಾ. ಚನ್ನಬಸವ ಪಟ್ಟದ್ದೇವರು ಮಠಕ್ಕೆ ಪೀಠಾಧಿಪತಿ ಮಾಡಿದರು. ಶ್ರೀಮಠಕ್ಕೆ ಆಸ್ತಿಪಾಸ್ತಿ ಏನು ಇರಲಿಲ್ಲ. ಸಂಕಷ್ಟದಲ್ಲೇ ಮಠವನ್ನು ಮುನ್ನಡೆಸಿಕೊಂಡು 1992ರಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನಡಿ ಮಠದಲ್ಲೇ ಸಣ್ಣದೊಂದು ಶಾಲೆ ತೆರೆದೆ. 40 ಮಕ್ಕಳು ಇಬ್ಬರು ಶಿಕ್ಷರಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಇಂದು 20 ಸಾವಿರ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. 2 ಸಾವಿರಕ್ಕೂ ಅಧಿಕ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಗಡಿಯಾರ ನೋಡಿ ಪಾಠ ಮಾಡದೇ ಮಕ್ಕಳ ಅಭಿವೃದ್ಧಿ ಗಮನಿಸಲಿ:

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಪೂರಕವಾಗಿದೆ. ಹಾಗಾಗಿ ಶಿಕ್ಷಕರಾದವರೂ ಗಡಿಯಾರ ನೋಡಿ ಪಾಠ ಮಾಡದೇ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಬೋಧನೆ ಮಾಡಬೇಕು. ಕೇವಲ ಅಂಕ ಗಳಿಕೆಗೆ ಒತ್ತು ನೀಡದೇ ಮಕ್ಕಳಲ್ಲಿ ಶಿಸ್ತು ಕಲಿಸಿಕೊಡುವುದರ ಜೊತೆಗೆ ಶಿಕ್ಷಣ, ಸಂಸ್ಕಾರ ನೀಡಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಮುಖ್ಯಸ್ಥರು ಹಾಜರಿದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿ ಮಧುಕರ ಗಾಂವಕರ ನಿರೂಪಿಸಿದರೆ ಲಕ್ಷ್ಮಣ ಮೇತ್ರೆ ವಂದಿಸಿದರು.₹25 ಲಕ್ಷ ರುಪಾಯಿ ಚೆಕ್‌ ಹಿಂತಿರುಗಿಸಿದ ಪಟ್ಟದ್ದೇವರು

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಮುಖ್ಯಸ್ಥರು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಪತ್ರ ಮತ್ತು 25ಲಕ್ಷ ರು. ಚೆಕ್‌ ನೀಡಿ ಶ್ರೀಗಳನ್ನು ಸನ್ಮಾನಿಸಿದರು. ಮಾತನಾಡುವ ವೇಳೆ ಡಾ. ಬಸವಲಿಂಗ ಪಟ್ಟದ್ದೇವರು ಭಾವುಕರಾಗಿ ನನಗೆ ಹಣ ಮುಖ್ಯವಲ್ಲ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮುಖ್ಯವಾಗಿದೆ. ನಮ್ಮ ಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕತೆ, ಮಾನವೀಯತೆ ಕಲಿಸಿ ಕೊಟ್ಟರೆ ಅದೇ ನನಗೆ ಕೊಡುವ ಬಹುದೊಡ್ಡ ಉಡುಗೊರೆ, ಕಾಣಿಕೆ ಆಗಲಿದೆ ಎಂದು ಹೇಳಿ ಕಾಣಿಕೆ ರೂಪದಲ್ಲಿ ನೀಡಿದ 25 ಲಕ್ಷ ರು ಚೆಕ್‌ನ ನಯವಾಗಿ ನಿರಾಕರಿಸಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಹಿಂತಿರುಗಿಸಿ, ಮಕ್ಕಳ ಮೇಲಿನ ಕಾಳಜಿ ಎಂತಹದ್ದು ಎನ್ನುವುದನ್ನು ತೋರಿಸಿಕೊಟ್ಟರು.

Share this article