ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಈ ಹಿಂದೆ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ವಿಜಯಲಕ್ಷ್ಮಿ ಅವರು ಬದಲಿಗೆ ಡಾ.ಶ್ರೀಧರ್ ಅವರನ್ನು ಸರ್ಕಾರ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ.
ಹಲವು ವರ್ಷಗಳಿಂದ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ಈ ಭಾಗದ ಜನರಿಗೆ ಆರೋಗ್ಯ ಸಂಜೀವಿನಿಯಂತೆ ಕೆಲಸ ನಿರ್ವಹಿಸುತ್ತಿತ್ತು. ಕಾಯಕಲ್ಪ ಪ್ರಶಸ್ತಿ ಸೇರಿದಂತೆ ಮೂರು ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿತ್ತು. ನಿತ್ಯ ಸುಮಾರು 300ರಿಂದ 400 ಮಂದಿ ಒಳ ಹಾಗೂ ಹೊರ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದು, ಉತ್ತಮ ಸೇವೆ ನೀಡುತ್ತಿದ್ದರು. ಆದರೆ, ಇದೀಗ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆ ಹಾಗೂ ಸ್ವಚ್ಛತೆ ಸೇರಿದಂತೆ ಇತರೆ ರೋಗಿಗಳಿಗೆ ಸಿಗುವ ಮೂಲ ಭೂತ ಸೌಕರ್ಯ ನಿರ್ವಹಣೆ ಇಲ್ಲದಿರುವುದರಿಂದ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ನಿರ್ವಹಣೆ ಬಗ್ಗೆ ಧ್ವನಿ ಎತ್ತಿ ಆಸ್ಪತ್ರೆಯಲ್ಲಿ ಮೂಲ ಭೂತ ಸೌಕರ್ಯಗಳು ಹಾಗೂ ಸರಿಯಾದ ನಿರ್ವಹಣೆ ಕೈಗೊಳ್ಳುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ‘ಕನ್ನಡಪ್ರಭ’ ಸಹ ಇದರ ಬಗ್ಗೆ ವಿಶೇಷ ವರದಿ ಮಾಡಿ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚತ್ತ ಮೇಲಧಿಕಾರಿಗಳು ಆಸ್ಪತ್ರೆಗೆ ನೂತನ ಮುಖ್ಯ ಆಡಳಿತಾಧಿಕಾರಿಯನ್ನಾಗಿ ಡಾ.ಶ್ರೀಧರ್ ಅವರನ್ನು ನೇಮಿಸಲಾಗಿದೆ.ಅಭಿನಂದನೆ:
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೂತನ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಡಾ.ಶ್ರೀಧರ್ ಅವರನ್ನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ಆರೋಗ್ಯ ರಕ್ಷ ಕವಚ ಸಮಿತಿ ಸದಸ್ಯ ಗೌಡಹಳ್ಳಿ ದೇವರಾಜು, ಕರವೇ ಬಸವರಾಜು, ಸತೀಶ್ ಆಸ್ಪತ್ರೆಯ ಸಿಬ್ಬಂದಿ ಕುಮಾರ್ ಇತರರು ಅಭಿನಂದಿಸಿದರು.