ಹೊಸ ಬೋರ್‌ವೆಲ್ 1 ಸಾವಿರ ಅಡಿಗೆ ₹1.60 ಲಕ್ಷ ನಿಗದಿ

KannadaprabhaNewsNetwork |  
Published : Jan 21, 2026, 01:30 AM IST
ಫೋಟೋ: 20 ಹೆಚ್‌ಎಸ್‌ಕೆ 2ಹೊಸಕೋಟೆ ತಾಲೂಕಿನ ವಾಬಸಂದ್ರ ಗೇಟ್ ಬಳಿ ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರ ಹಾಗೂ ಏಜೆಂಟರ ಸಂಘದ ಸಭೆ ಯಶಸ್ವಿಯಾಗಿ ನಡೆಯಿತು. | Kannada Prabha

ಸಾರಾಂಶ

ಇದಕ್ಕೂ ಮೊದಲು 1 ಸಾವಿರ ಅಡಿಗೆ ₹1.40 ಲಕ್ಷ ದರ ನಿಗದಿ ಮಾಡಿದ್ದೆವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಟ್, ಆಯಿಲ್, ಹ್ಯಾಮರ್, ಕಾರ್ಮಿಕ ಹಾಗೂ ನಿರ್ವಹಣಾ ವೆಚ್ಚ ಶೇ.೩೦ರಿಂದ ೫೦ರಷ್ಟು ಹೆಚ್ಚಳವಾಗಿರುವ ಪರಿಣಾಮ ರಿಗ್ ಮಾಲೀಕರು ಬೋರ್‌ವೆಲ್ ಲಾರಿಗಳ ನಿರ್ವಹಣೆ ಮಾಡುವುದೇ ಸವಾಲಿನ ಕೆಲಸವಾಗಿದೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಬೋರ್‌ವೆಲ್ ಕೊರೆಸಲು ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆ ಆಗಿರುವ ಹಿನ್ನೆಲೆ 1 ಸಾವಿರ ಅಡಿಗೆ ₹1.60 ಲಕ್ಷ ದರ ನಿಗದಿ ಮಾಡಲಾಗಿದೆ ಎಂದು ಬೋರ್‌ವೆಲ್ ಮಾಲೀಕರ ಅಧ್ಯಕ್ಷ ಚನ್ನಕೇಶವ ತಿಳಿಸಿದರು.

ತಾಲೂಕಿನ ವಾಬಸಂದ್ರ ಗೇಟ್ ಬಳಿ ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರ ಹಾಗೂ ಏಜೆಂಟರ ಸಂಘದ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇದಕ್ಕೂ ಮೊದಲು 1 ಸಾವಿರ ಅಡಿಗೆ ₹1.40 ಲಕ್ಷ ದರ ನಿಗದಿ ಮಾಡಿದ್ದೆವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಟ್, ಆಯಿಲ್, ಹ್ಯಾಮರ್, ಕಾರ್ಮಿಕ ಹಾಗೂ ನಿರ್ವಹಣಾ ವೆಚ್ಚ ಶೇ.೩೦ರಿಂದ ೫೦ರಷ್ಟು ಹೆಚ್ಚಳವಾಗಿರುವ ಪರಿಣಾಮ ರಿಗ್ ಮಾಲೀಕರು ಬೋರ್‌ವೆಲ್ ಲಾರಿಗಳ ನಿರ್ವಹಣೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಪ್ರಮುಖವಾಗಿ 25 ಸಾವಿರ ಇದ್ದ ಬಿಟ್ ಕಳೆದ 15 ದಿನಗಳಲ್ಲಿ 53 ಸಾವಿರಕ್ಕೆ ಏರಿಕೆಯಾಗಿದೆ. ಇದರ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ಆದ್ದರಿಂದ ಈಗ ಬೋರ್ ವೆಲ್ ಕೊರೆಯಲು ಬೆಲೆ ಹೆಚ್ಚಳ ಮಾಡಿರುವುದರಿಂದ ಸ್ವಲ್ಪ ನಿಟ್ಟುಸಿರುವ ಬಿಡುವಂತಾಗಿದೆ. ಇದಕ್ಕೆ ರೈತರ ಸಹಕಾರ ಕೂಡ ಅತ್ಯಗತ್ಯ. ಸುಮಾರು ೧ ವಾರದಿಂದ ವಾಹನಗಳನ್ನು ನಿಲ್ಲಿಸಲಾಗಿತ್ತು. ಈಗ ಮಾಲೀಕರು, ಏಜೆಂಟರ ಸಭೆ ನಂತರ ಹೊಸ ದರ ನಿಗದಿ ಮಾಡಲಾಗಿದೆ ಎಂದರು.

ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರ ಸಂಘದ ಸದಸ್ಯ ಪ್ರಕಾಶ್ ಮಾತನಾಡಿ, ಬೋರ್‌ವೆಲ್‌ನ ಒಂದು ಬಿಟ್‌ನ್ನು 1800 ಅಡಿವರೆಗೆ ಬಳಕೆ ಮಾಡಬಹುದಾಗಿದೆ. ಆದರೆ ಒಮ್ಮೆ ಬಳಕೆ ಮಾಡಿದ್ದು ಮತ್ತೊಮ್ಮೆ ಬಳಕೆಗೆ ಬರಲ್ಲ. ಹಳೆಯ ದರದಿಂದ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಈಗ ಅಂತಿಮವಾಗಿ ಸಭೆ ನಡೆಸಿ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಾಯಿತು. ಇದರಿಂದ ರೈತರಿಗೆ, ಮಾಲೀಕರಿಗೆ, ಏಜೆಂಟರಿಗೂ ಅನುಕೂಲವಾಗಲಿದೆ ಎಂದರು.

ಚರ್ಲಥನ್, ಷಣ್ಮುಗ, ರಾಜು, ಪ್ರಕಾಶ್, ಮುರಳಿ, ಶಿವನ್, ನಂದಕುಮಾರ್, ಕೇಶವನ್, ಪಳನಿಸ್ವಾಮಿ, ಇಳಿಯಪ್ಪನ್, ಮುನಿಕೃಷ್ಣ, ತಂಗರಾಜ್, ವೇಲುಮುರುಗನ್, ಶಂಕರ್, ಶೇಖರ್ ಹಾಜರಿದ್ದರು.

--------ಲಭ್ಯವಾಗದ ಕಾರ್ಬೆಡ್ ವಸ್ತು

ಬೋರ್‌ವೆಲ್ ಕೊರೆಯಲು ಬೇಕಾಗಿರುವ ಪ್ರಮುಖ ವಸ್ತು ಬಿಟ್ ತಯಾರಿಕೆಗೆ ಬಳಕೆ ಮಾಡುವ ಕಾರ್ಬೆಡ್ ಎನ್ನುವ ವಸ್ತುವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೇ ಕಾರ್ಬನ್ ವಸ್ತುವನ್ನು ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿಗೆ ಸಿದ್ಧಪಡಿಸಲು ಬಳಕೆ ಮಾಡುವ ಉದ್ದೇಶದಿಂದ ಚೀನಾ ದೇಶದಲ್ಲಿ ಕಾರ್ಬೆಡ್ ವಸ್ತುವಿಗೆ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. ಅಗತ್ಯ ಪ್ರಮಾಣದಲ್ಲಿ ಚೀನಾದಿಂದ ಕಾರ್ಬೆಡ್ ವಸ್ತು ಲಭ್ಯವಾಗುತ್ತಿಲ್ಲ. ಆದ್ದರಿಂದ ಬಿಟ್‌ನ ದರ ₹25 ಸಾವಿರದಿಂದ ₹53 ಸಾವಿರಕ್ಕೆ ಜಿಗಿದಿದೆ ಎಂದು ಬೋರ್‌ವೆಲ್ ಮಾಲೀಕ ಚಲರ್ಥನ್ ತಿಳಿಸಿದರು.

ಫೋಟೋ: 20 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ವಾಬಸಂದ್ರ ಗೇಟ್ ಬಳಿ ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರ ಹಾಗೂ ಏಜೆಂಟರ ಸಂಘದ ಸಭೆ ಯಶಸ್ವಿಯಾಗಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ