ಹಾನಗಲ್ಲ: ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಹೊಸ ಬದಲಾವಣೆ ತರಲಾಗಿದೆ. ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಯೋಗ್ಯ ಮತ್ತು ಸಮರ್ಥ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಆಯ್ಕೆ ಪ್ರಕ್ರಿಯೆಯ ಬದಲಿಗೆ ವಿನೂತನ ಪದ್ಧತಿ ನಡೆಸಲಾಗುತ್ತಿದೆ ಎಂದು ಸಂಘಟನ್ ಸೃಜನ್ ಅಭಿಯಾನದ ಎಐಸಿಸಿ ಉಸ್ತುವಾರಿಯೂ ಆಗಿರುವ ಆಂಧ್ರಪ್ರದೇಶದ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಶೇಖ್ ಮಸ್ತಾನ್ ವಲಿ ಹೇಳಿದರು.
ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುವ ಈ ವಿನೂತನ ಪ್ರಯತ್ನಕ್ಕೆ ಎಲ್ಲೆಡೆ ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಚಿಂತನೆಯ ಫಲವಾಗಿ ಸಂಘಟನ್ ಸೃಜನ್ ಅಭಿಯಾನ ನಡೆದಿದೆ. ಸಂಘಟನೆಗೆ ಹೊಸ ಚೈತನ್ಯ ತುಂಬುವ ಈ ಅಭಿಯಾನ ಹಾವೇರಿ ಜಿಲ್ಲೆಯಲ್ಲಿ ಮುಂದಿನ ೮-೧೦ ದಿನಗಳ ಕಾಲ ನಡೆಯಲಿದೆ. ಪ್ರತಿಯೊಂದು ಬ್ಲಾಕ್ ಮಟ್ಟದಲ್ಲಿಯೂ ಸಹ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಎಐಸಿಸಿಗೆ ಸಮಗ್ರ ವರದಿ ಸಲ್ಲಿಸಲಾಗುವುದು. ವರದಿ ಆಧರಿಸಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ೬ ಜಿಲ್ಲೆಗಳ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಮಾಡುವ ಅಭಿಯಾನದಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡುವ ಅವಕಾಶವನ್ನು ಎಐಸಿಸಿ ನನಗೂ ಸಹ ಕಲ್ಪಿಸಿತ್ತು. ಅಭಿಯಾನದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಶಾಸಕರ ಅಭಿಪ್ರಾಯಕ್ಕಿಂತ ಕಾರ್ಯಕರ್ತರ ಮನದಾಳದ ಅನಿಸಿಕೆ ಆಧರಿಸಿ ಜಿಲ್ಲಾ ಸಮಿತಿಯ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಮುಂಬರುವ ದಿನಗಳಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಬೂತ್‌ಮಟ್ಟದಿಂದ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಭಿಯಾನದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿ ತಮ್ಮ ಅಭಿಪ್ರಾಯ ಮುಕ್ತವಾಗಿ ಹಂಚಿಕೊಳ್ಳುವಂತೆ ಕರೆ ನೀಡಿದರು.ಅಭಿಯಾನದ ಕೆಪಿಸಿಸಿ ಉಸ್ತುವಾರಿ ಪುಷ್ಪಾ ನಾಯ್ಕ, ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ್‌ಕುಮಾರ ನೀರಲಗಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಹನುಮಂತಪ್ಪ ಮರಗಡಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ ಸೇರಿದಂತೆ ಇನ್ನಿತರ ಪ್ರಮುಖರು ಇದ್ದರು. ಯಾಸೀರ್‌ಅರಾಫತ್ ಮಕಾನದಾರ ನಿರೂಪಿಸಿದರು. ಕಾರ್ಯಕರ್ತರಿಂದ ಸಂಗ್ರವಾಗುವ ಅಭಿಪ್ರಾಯ ಮತ್ತು ಸಲಹೆಗಳ ಆಧಾರದ ಮೇಲೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಸಂಘಟನ್ ಸೃಜನ್ ಅಭಿಯಾನದಲ್ಲಿ ಎಲ್ಲಾ ಹಂತದ ಕಾರ್ಯಕರ್ತರಿಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯೋಗ್ಯ ಮತ್ತು ಸಮರ್ಥ ವ್ಯಕ್ತಿಯನ್ನು ಕಾರ್ಯಕರ್ತರೇ ಆಯ್ಕೆ ಮಾಡಲಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.