ಹೊಸಕೋಟೆ: ನಗರದ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರಸ್ವಾಮಿ ದೇವಾಲಯಕ್ಕೆ ನೂತನ ರಥವನ್ನು ಮಾಜಿ ಸಂಸದ ಬೆಂಡಿಗಾನಹಳ್ಳಿಯ ಬಿ.ಎನ್.ಬಚ್ಚೇಗೌಡರ ಕುಟುಂಬದಿಂದ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಇತಿಹಾಸ ಪ್ರಸಿದ್ಧ ಅವಿಮುಕ್ತೇಶ್ವರ ಸ್ವಾಮಿ ದೇವಾಲಯಕ್ಕೆ ನೂತನ ತೇರನ್ನು ಕೊಡುವ ಅವಕಾಶ ನಮ್ಮ ಕುಟುಂಬಕ್ಕೆ ಸಿಕ್ಕಿದ್ದು ನಮ್ಮ ಸುದೈವ. ನಗರ ನಾಗರಿಕರು, ತೇರು ಕಟ್ಟುವವರ ಮನವಿಗೆ ಸ್ಪಂದಿಸಿ ನೂತನ ತೇರನ್ನು ಸಮರ್ಪಣೆ ಮಾಡುತ್ತಿದ್ದೇವೆ. ಕೇವಲ ಒಂದೇ ವರ್ಷದಲ್ಲಿ ಉಡುಪಿಯಲ್ಲಿ ರಥವನ್ನು ಸಿದ್ಧಪಡಿಸಿ ತರಲಾಗಿದೆ. ಮೇ ತಿಂಗಳಿನಲ್ಲಿ ನಡೆಯುವ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಗುವುದು ಎಂದು ಹೇಳಿದರು.
ನೂತನ ರಥದ ಆಗಮನದ ವೇಳೆ ನಗರದ ರಥ ಬೀದಿಯಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ ರಂಗೋಲಿಯಲ್ಲಿ ಹೂ ತುಂಬಿಸಿ, ರಥಕ್ಕೆ ಪುಷ್ಪ ಮಳೆಗರೆದು ಭವ್ಯ ಸ್ವಾಗತ ಕೋರಿದರು. ಸುಮಾರು 150ಕ್ಕೂ ಹೆಚ್ಚಿನ ಮಂಗಳವಾದ್ಯದ ತಂಡದೊಂದಿಗೆ ರಥ ಬೀದಿಯಲ್ಲಿ ನೂತನ ರಥವನ್ನು ಮೆರವಣಿಗೆ ಮಾಡಿ ದೇವಾಲಯಕ್ಕೆ ಸಮರ್ಪಣೆ ಮಾಡಲಾಯಿತು.ಮಾಜಿ ಸಂಸದ ಬಿ.ಎನ್.ಬಚ್ಚೆಗೌಡ, ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜು, ಮಾಜಿ ಅಧ್ಯಕ್ಷ ಸಿ.ಜಯರಾಜ್ ಸೇರಿದಂತೆ ಇತರೆ ಗಣ್ಯರು ಹಾಜರಿದ್ದರು.
3: ಹೊಸಕೋಟೆಯ ರಥಬೀದಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ನೂತನ ತೇರಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ನಗರ ನಾಗರಿಕರು ಭಾಗವಹಿಸಿದ್ದರು.
ಉಡುಪಿಯಲ್ಲಿ ಸಿದ್ದಗೊಂಡು ಹೊಸಕೋಟೆಗೆ ಆಗಮಿಸಿದ ನೂತನ ರಥ.