ಮುಳಗುಂದ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಪರಸ್ಪರ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸುವ ಮೂಲಕ ಮಾದರಿಯಾಗಬೇಕು ಎಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷ ಹಜರತ್ ಹಫೀಜ್ ಸೈಯದ್ ಮಹಮ್ಮದಅಲಿ ಅಲ್-ಹುಸೇನಿಸಾಹೇಬ್ ಹೇಳಿದರು.
ಪಟ್ಟಣದ ಶ್ರೀಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾ ಭವನದಲ್ಲಿ ಭಾನುವಾರ ಅಂಜುಮನ್-ಏ-ಇಸ್ಲಾಂ ಕಮೀಟಿಯಿಂದ ಪ್ರವಾದಿ ಹಜರತ ಮೊಹಮ್ಮದ ಪೈಗಂಬರ ರಸೂಲಲ್ಲಾ ಅವರ 1500ನೇ ಜಯಂತ್ಯುತ್ಸವ ಅಂಗವಾಗಿ ನಡೆದ ಪ್ರಥಮ ಬಾರಿಗೆ ಇಸ್ಲಾಂ ಧರ್ಮದ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಸಾಮಾಜಿಕ ಸಮನ್ವಯ, ದೇಶದ ಬೆಳವಣಿಗೆಗೆ ಹಿಂದೂ-ಮುಸ್ಲಿಂ ಐಕ್ಯತೆಯಿಂದ ಇರಬೇಕು. ಮನಸು ಒಡೆಯುವವರಿಂದ ದೂರ ಇದ್ದು, ಮನಸ್ಸು ಕೂಡಿಸುವರೊಂದಿಗೆ ಸೇರಿ ನಿಮ್ಮ ನವ ಜೀವನ ಸುಂದರವಾಗಿಸಿಕೊಳ್ಳಬೇಕು ಎಂದರು.
ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಆರ್ಥಿಕ ಹೊರೆ ತಡೆಯಬಹುದು. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿಯಾಗಿದೆ. ಈ ಉತ್ತಮ ಸಾಮಾಜಿಕ ಕಾರ್ಯ ಮಾಡಿದ ಅಂಜುಮನ್-ಏ-ಇಸ್ಲಾಂ ಕಮೀಟಿ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.ಸಮ್ಮುಖ ವಹಿಸಿದ್ದ ಸಜ್ಜಾದಾ ನಸೀನ ನೀಲಂಗಾ ಶರೀಫ ಮಹಾರಾಷ್ಟ್ರದ ಹಜರತ್ ಸೈಯದಶಾ ಹೈದರವಲಿ ನಬೀರಾ ಖಾದ್ರಿ ಮಾತನಾಡಿ, ಇದು ಭಾರತೀಯ ಸಂಸ್ಕೃತಿ, ಸಂಪ್ರದಾಯ. ಸೌಹಾರ್ದತೆಯಿಂದ ಈ ಒಂದು ಅರ್ಥಪೂರ್ಣ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ವಾಗತಾರ್ಹವಾಗಿದೆ ಎಂದರು.
ಬೂದೀಶ್ವರ ಹೊಸಳ್ಳಿ ಮಠದ ಅಭಿನವ ಬೂದೀಶ್ವರ ಶ್ರೀಗಳು ಮಾತನಾಡಿ, ಮನುಷ್ಯ, ಮನುಷ್ಯನನ್ನು ಪ್ರೀತಿಸಿದಿದ್ದರೆ.ಇನ್ನಾವುದನ್ನು ಪ್ರೀತಿಸುತ್ತಿರಿ, ಮನುಷ್ಯನಲ್ಲಿ ಮೊದಲು ಮನುಷ್ಯತ್ವ ಮುಖ್ಯವಾಗಿ ಇರಬೇಕು. ಎಲ್ಲ ಧರ್ಮಗಳು ಹೇಳಿದ್ದು ಒಂದೇ ನಿನ್ನನ್ನು ನೀ ಹೇಗೆ ಪ್ರೀತಿಸುತ್ತಿ ಅದೇ ರೀತಿ ಪರಸ್ಪರರನ್ನು ಪ್ರೀತಿಯಿಂದ ಕಂಡು ಪ್ರೀತಿ ವಿಶ್ವಾಸ ಸ್ನೇಹದಿಂದ ಬದುಕು. ಸ್ವಾರ್ಥ ಬಿಟ್ಟು ಸಾರ್ಥಕತೆಯಿಂದ ಜೀವನ ನಡೆಸಬೇಕು. ಈ ಎಲ್ಲ ಗುಣ ನವ ವಧು ವರರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಡೆಸಬೇಕು. ಹಿಂದೂ-ಮುಸ್ಲಿಂ ಎಂದು ಬೇಧ-ಭಾವ ಮಾಡದೇ ಎಲ್ಲರೂ ಒಂದೇ ಎಂದು ಜೀವನ ನಡೆಸೋಣ. ಭವ್ಯ ಮನುಷ್ಯತ್ವಕ್ಕಾಗಿ ಬದುಕು ನಡೆಸೋಣ ಎಂದರು.ಧಾರವಾಡ ಮುರುಘಾಮಠ, ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಅನಗತ್ಯ ಆರ್ಥಿಕ ಅಪಮೌಲ್ಯ ತಡೆದು ಸಾಮಾಜಿಕ ಜೀವನಕ್ಕೆ ಸಹಕಾರ ನೀಡುವ ಸಾಮೂಹಿಕ ವಿವಾಹ ಆಯೋಜನೆ ಇತರರಿಗೆ ಮಾದರಿ. ಜಾತಿಗಿಂತ ನೀತಿ, ಮನುಷ್ಯತ್ವ ದೊಡ್ಡದು. ಪರರಿಗೆ ಉಪಕಾರ ಮಾಡಬೇಕು ಎಂದರು.
ಈ ವೇಳೆ ಅಧ್ಯಕ್ಷತೆಯನ್ನು ಅಂಜುಮನ್-ಏ-ಇಸ್ಲಾಂ ಕಮೀಟಿ ಅಧ್ಯಕ್ಷ ತಾಜುದ್ದೀನ ಕಿಂಡ್ರಿ ವಹಿಸಿದ್ದರು. ಮಾಜಿ ಸಂಸದ ಐ.ಜಿ. ಸನದಿ, ಜನಾಬ್ ಮಹಮ್ಮದ ಇಸ್ಮಾಯಿಲ್ ಖಾಜಿ, ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಗುರಣ್ಣ ಬಳಗಾನೂರ, ಹುಮಾಯನ್ ಮಾಗಡಿ, ಬಸವರಾಜ ಸುಂಕಾಪುರ, ರಾಮಣ್ಣ ಕಮಾಜಿ, ಎನ್.ಆರ್. ದೇಶಪಾಂಡೆ, ಎಸ್.ಸಿ. ಬಡ್ನಿ ಸೇರಿದಂತೆ ಸೈಯದ್‌ಅಲಿ ಶೇಖ, ವಿಜಯ ನೀಲಗುಂದ ಸೇರಿದಂತೆ ಕಮೀಟಿ ಪದಾಧಿಕಾರಿಗಳು ಹಾಗೂ ಗುರು-ಹಿರಿಯರು ಇದ್ದರು.