ಮೌಲ್ಯವರ್ಧಿತ ಆಹಾರ ಉತ್ಪನ್ನಗಳಿಂದ ಹೊಸ ಆಯಾಮ

KannadaprabhaNewsNetwork |  
Published : Jul 25, 2025, 12:30 AM IST
ಮೌಲ್ಯವರ್ಧಿತ ಆಹಾರ ಉತ್ಪನ್ನಗಳಿಂದ ಹೊಸ ಆಯಾಮ : ಪಿ.ಬಿ. ಡಾ. ಸಿಂಧು | Kannada Prabha

ಸಾರಾಂಶ

ಮೌಲ್ಯವರ್ಧಿತ ಉತ್ಪನ್ನಗಳು ಮನೆಯ ಬಳಕೆಯೊಂದಿಗೆ ಗೃಹೋದ್ಯಮದ ದಿಕ್ಕಿನಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ನೀಡಲಿದ್ದು ಆಯಾ ಋತುಗಳಿಗೆ ತಕ್ಕಂತೆ ಮಹಿಳೆಯರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ಅರ್ಥಿಕ ಸದೃಢರಾಗಬಹುದು ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ತಜ್ಞೆ ಡಾ. ಪಿ.ಬಿ. ಸಿಂಧು ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮೌಲ್ಯವರ್ಧಿತ ಉತ್ಪನ್ನಗಳು ಮನೆಯ ಬಳಕೆಯೊಂದಿಗೆ ಗೃಹೋದ್ಯಮದ ದಿಕ್ಕಿನಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ನೀಡಲಿದ್ದು ಆಯಾ ಋತುಗಳಿಗೆ ತಕ್ಕಂತೆ ಮಹಿಳೆಯರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ಅರ್ಥಿಕ ಸದೃಢರಾಗಬಹುದು ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ತಜ್ಞೆ ಡಾ. ಪಿ.ಬಿ. ಸಿಂಧು ತಿಳಿಸಿದರು.

ತಾಲೂಕಿನ ಈಚನೂರಿನಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾವು ಮತ್ತು ಬೇಲದ ಹಣ್ಣುಗಳು ಭಾರತದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಹಣ್ಣುಗಳಾಗಿದ್ದು ತಂಪು ಬಿಸಿಲಿನ ಮಿಶ್ರ ಹವಾಮಾನದಲ್ಲಿ ಚೈತ್ರ ವೈಶಾಖ ತಿಂಗಳಲ್ಲಿ ಈ ಹಣ್ಣುಗಳು ಸುಗ್ಗಿಗೆ ಬರುತ್ತವೆ. ಇದು ವಿಟಮಿನ್ ಎ, ಸಿ, ನಾರು ಹಾಗೂ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಲದ ಹಣ್ಣು ಕೂಡ ಸಮಾನವಾದ ಪೌಷ್ಟಿಕತೆಯನ್ನು ಹೊಂದಿದೆ. ಇದು ದೀರ್ಘಕಾಲ ಶೇಖರಿಸಬಹುದಾದ ಹಣ್ಣುಗಳಲ್ಲೊಂದು ಪಚನಶಕ್ತಿ ಹೆಚ್ಚಿಸಲು, ಲಿವರ್ ಆರೋಗ್ಯ ಹಾಗೂ ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತವಾಗಿದೆ. ಹೀಗಿರುವಾಗ ಈ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ತಯಾರಿಸಿ ವರ್ಷ ಪೂರ್ತಿ ಬಳಸುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಮನೆ ಕೆಲಸದೊಂದಿಗೆ ಇಂತಹ ಸ್ಥಳೀಯವಾಗಿ ಸಿಗುವ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡುವುದರಿಂದ ಆರ್ಥಿಕವಾಗಿ ಅಭಿವೃದ್ದಿ ಹೊಂದುವ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರದಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಪೌಷ್ಟಿಕ ಆಹಾರ ತಯಾರಿಕೆಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುತ್ತದೆ ಎಂದರು. ಕೆವಿಕೆ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ವಿ. ಗೋವಿಂದಗೌಡ ಮಾತನಾಡಿ ಈ ತರಬೇತಿಗಳು ಗ್ರಾಮೀಣ ಮಹಿಳೆಯರಲ್ಲಿ ತಾಂತ್ರಿಕ ಜ್ಞಾನ ಹರಡುವ ಮೂಲಕ ಸ್ವಾವಲಂಬಿ ಬದುಕಿಗೆ ದಾರಿಯಾಗಲಿದೆ ಎಂದರು. ಈ ತರಬೇತಿಯಲ್ಲಿ ಸುಮಾರು 20 ಮಹಿಳೆಯರು ಭಾಗವಹಿಸಿ ಮಾವಿನಿಂದ ತಯಾರಿಸಬಹುದಾದ ಜ್ಯಾಮ್, ಸ್ಕ್ವಾಶ್, ಉಪ್ಪಿನಕಾಯಿ, ಒಣ ಮಾವಿನ ಪುಡಿ ಮತ್ತು ಬೇಲದ ಹಣ್ಣಿನಿಂದ ತಯಾರಿಸಬಹುದಾದ ಪಲ್ಪ್ ಪುಡಿ ಮತ್ತು ಬರ್ಫಿ ತಯಾರಿಕೆಯ ಪ್ರಾಯೋಗಿಕ ತರಬೇತಿ ಪಡೆದರು. ಮಹಿಳೆಯರು ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ತಮ್ಮ ಗ್ರಾಮೀಣ ಬದುಕಿನಲ್ಲಿ ಹೊಸ ಆರ್ಥಿಕ ದಾರಿ ಅಳೆಯಲು ಇದು ಉತ್ತಮ ತರಬೇತಿಯಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’