ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ನರ್ಸ್‍ಗಳು ಕೆಲಸದ ವಿಷಯಕ್ಕೆ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ.ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ರಮ್ಯಾ ಎಂಬ ನರ್ಸ್ ಕಾಂತಮ್ಮ ಎಂಬ ನರ್ಸ್ ಮೇಲೆ ಹಲ್ಲೆ ಮಾಡಿದ್ದು, ಈ ಘಟನೆಯಿಂದ ಇಬ್ಬರು ನರ್ಸ್‍ಗಳು ರಜೆ ಹಾಕಿದ ಪರಿಣಾಮ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ನರ್ಸ್‍ಗಳು ಇಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಪರದಾಡಿದರು.
ನರ್ಸ್‍ಗಳಾದ ಕಾಂತಮ್ಮ ಹಾಗೂ ರಮ್ಯಾ ಇಬ್ಬರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಸೋಮವಾರ ರಾತ್ರಿ 8 ಗಂಟೆಗೆ ರಮ್ಯಾ ಅವರ ಬೆಳಿಗಿನ ಪಾಳಿ ಕೆಲಸ ಮುಗಿದಿದ್ದು, ನರ್ಸ್ ಕಾಂತಮ್ಮ ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ, ಕಾಂತಮ್ಮ ರಾತ್ರಿ 8 ಗಂಟೆ ಪಾಳಿಗೆ ಕೆಲಸಕ್ಕೆ ಬಂದಾಗ ಆಸ್ಪತ್ರೆಯಲ್ಲೇ ಇದ್ದ ರಮ್ಯಾ ಹಾಗೂ ಕಾಂತಮ್ಮ ನಡುವೆ ಚಿಕ್ಕಪುಟ್ಟ ವಿಷಯಕ್ಕೆ ಜಗಳವಾಗಿದೆ. ನರ್ಸ್ ರಮ್ಯಾ, ಕಾಂತಮ್ಮ ಮೇಲೆ ಹಲ್ಲೆ ಮಾಡಿದ್ದು ಮುಖ ಪರಚಿದ್ದಾರೆ ಎಂದು ಆರೋಪಿಸಿ ರಮ್ಯಾ ಮೇಲೆ ನರ್ಸ್ ಕಾಂತಮ್ಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದೇ ಘಟನೆಗೆ ಸಂಬಂಧಿಸಿದಂತೆ ನರ್ಸ್ ರಮ್ಯಾ ಪ್ರತಿಯಾಗಿ ನನ್ನ ಮೇಲೆ ನರ್ಸ್ ಕಾಂತಮ್ಮ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಇಬ್ಬರ ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿ ನರ್ಸ್‍ಗಳ ಕೊರತೆಯಿದೆ. ಆದರೆ ಆಸ್ಪತ್ರೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮೂವರು ನರ್ಸ್‍ಗಳು ಕೂಡ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಮೂವರನ್ನು ಬದಲಾಯಿಸಿ ಹೆಚ್ಚುವರಿಗೆ ಐವರು ನರ್ಸ್‍ಗಳನ್ನು ನೇಮಕ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ವಾಪಾಸ್ಸು ಹೋದ ರೋಗಿಗಳು: ಆಸ್ಪತ್ರೆಗೆ ಹೊಸದಾಗಿ ಖಾಯಂ ವೈದ್ಯರು ಸೋಮವಾರ ಕೆಲಸಕ್ಕೆ ಹಾಜರಾಗಿದ್ದು, ರಾತ್ರಿ 8 ಗಂಟೆವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ 8 ಗಂಟೆವರೆಗೆ ಒಬ್ಬರು ನರ್ಸ್ ಕರ್ತವ್ಯ ನಿರ್ವಹಿಸುತ್ತಾರೆ. ಪ್ರತಿನಿತ್ಯ ನೂರಾರು ಜನ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‍ಗಳು ಇಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
‘ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದ ನರ್ಸ್‍ಗಳ ಜಗಳದ ಬಗ್ಗೆ ಮಾಹಿತಿ ಬಂದಿದೆ. ಇಬ್ಬರು ರಜೆ ಹಾಕಿದ ಪರಿಣಾಮ ಯಾರೂ ಕರ್ತವ್ಯಕ್ಕೆ ಬಂದಿಲ್ಲ. ಬೇರೆ ನರ್ಸ್‍ಗಳನ್ನು ನಿಯೋಜಿಸಲಾಗುತ್ತದೆ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’.-ಪದ್ಮಿನಿ, ತಾಲೂಕು ಆರೋಗ್ಯಾಧಿಕಾರಿ, ನೆಲಮಂಗಲ