-ದೇಶಕ್ಕೆ ಸ್ವಾತಂತ್ರ್ಯ ದೊರೆತು 2047 ಕ್ಕೆ 100 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಘೋಷಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶಕ್ಕೆ ಸ್ವಾತಂತ್ರ್ಯ ದೊರೆತು 2047 ಕ್ಕೆ 100 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಮಂಡಳಿ ‘ಏಳು ಬೀಜಗಳಿಂದ ಏಳು ಲಕ್ಷ ಟನ್‌ಗೆ ಭಾರತದ ಕಾಫಿ ಜಿಗಿತ’ ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಎಂ.ಜೆ.ದಿನೇಶ್ ತಿಳಿಸಿದರು.
ನಗರದ ಕಾಫಿ ಮಂಡಳಿ ಉಪ ನಿರ್ದೇಶಕರ ವಿಸ್ತರಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಶತಮಾನೋತ್ಸವ ಲಾಂಚನ ಹಾಗೂ ಧ್ಯೇಯವಾಕ್ಯ ಅನಾವರಣ ಹಾಗೂ ಕಾಫಿ ಯಾತ್ರಾ ವಸ್ತು ಪ್ರದರ್ಶನ 2.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನವೆಂಬರ್‌ನಲ್ಲಿ ಶತಮಾನೋತ್ಸವ ಆಚರಣೆ ಸಂದರ್ಭವೇ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ರೋಗ ನಿರೋಧಕ ಹೊಸ ಕಾಫಿ ತಳಿ ಬಿಡುಗಡೆ ಮಾಡಲಿದೆ. ಇದರ ಜೊತೆಗೆ ಈ ಸಂಸ್ಥೆ ವೈಜ್ಞಾನಿಕ ಸಂಶೋಧನೆ, ಬೆಳೆಗಾರರ ಪಾಲ್ಗೊಳ್ಳುವಿಕೆ, ಮಾರುಕಟ್ಟೆ ವಿಸ್ತರಣೆ ಈ ಮೂರು ಆಶಯ ಹೊಂದಿದೆ. ಬೆಳೆಗಾರರು ಈ ಯೋಜನೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಕಾಫಿ ಮೌಲ್ಯ ವರ್ಧನೆ ಹೆಚ್ಚಿಸುವ ಉದ್ದೇಶ ಕೂಡ ಇದೆ. ಮೌಲ್ಯ ವರ್ಧನೆ ಎಂದರೆ ಉತ್ಪಾದನೆ ಹೆಚ್ಚಿಸುವಿಕೆ ಹಾಗೂ ನಿರ್ವಹಣಾ ವೆಚ್ಚ ಕಡಿತಗೊಳಿಸುವುದು. ದೇಶೀಯ ಮಾರುಕಟ್ಟೆಯಲ್ಲೇ ಕಾಫಿಗೆ ಉತ್ತಮ ಬೆಲೆ ತರುವುದು. ಈ ಹಿನ್ನೆಲೆಯಲ್ಲಿ ಸಂಶೋಧನಾ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಿಸಿಆರ್‌ಐ ತನ್ನ ಶತಮಾನೋತ್ಸವ ಸಂವತ್ಸರದ ಸಂಭ್ರಮದಲ್ಲಿ ವೈಜ್ಞಾನಿಕ ಆಂದೋಲನದ ಮೂಲಕ ಇದೀಗ ತನ್ನ ಲಾಂಛನ ಮತ್ತು ಧ್ಯೇಯ ವಾಕ್ಯ ಬಿಡುಗಡೆ ಮಾಡಿದೆ. ಕರ್ನಾಟಕ ಕಾಫಿಗೆ ತನ್ನದೇ ಇತಿಹಾಸ ಮತ್ತು ಸಂಸ್ಕೃತಿ ಇದೆ, ಇದನ್ನು ಮುಂದಿನ ಜನಾಂಗಕ್ಕೆ ಒಯ್ಯಬೇಕಾಗಿದೆ. ಇದೇ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ಪ್ರಯೋಜನವಾಗಲೆಂದು ಕಾಫಿ ವಸ್ತು ಸಂಗ್ರಹಾಲಯವನ್ನು ನವೀಕರಿಸಿ ಪುನರ್ ಸಮರ್ಪಣೆ ಮಾಡಲಾಗುತ್ತಿದೆ ಎಂದರು.ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಫೈಸಿ ಕಾಯ್ದೆಯಿಂದ ಕಾಫಿ ಬೆಳೆ ಹೊರಗಿಡಬೇಕೆಂದು ಸಂಸತ್ತಿನಲ್ಲಿ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಇದೊಂದು ಜಟಿಲ ಸಮಸ್ಯೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದಾಗ ತಾತ್ಕಾಲಿಕ ಸೂತ್ರ ರೂಪಿಸಿ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿ, ಬಲವಂತದ ಸಾಲ ವಸೂಲಾತಿ ಸ್ಥಗಿತಗೊಳಿಸಿ, ಆರು ತಿಂಗಳ ಕಾಲಕ್ಕೆ ವಿಸ್ತರಿಸಿ ಏಕಕಾಲಕ್ಕೆ ಸಾಲ ತೀರುವಳಿಗೆ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಸುಸ್ತಿದಾರ ರಾಗಿರುವ 800 ಕಾಫಿ ಬೆಳೆಗಾರರಲ್ಲಿ ಒನ್‌ಟೈಮ್ ಸೆಟ್ಲ್‌ಮೆಂಟ್ ಮೂಲಕ 500 ಜನರ ಸಾಲ ತೀರಿಸಿದ್ದಾರೆ. ಇನ್ನು 300 ಬೆಳೆಗಾರರು ಕಾಯ್ದೆ ವ್ಯಾಪ್ತಿಯಲ್ಲಿ ಸಮಯ ಕಾಯುತ್ತಿದ್ದಾರೆ. ಇದರ ಬಗ್ಗೆ ಸಹ ಸಚಿವರ ಜೊತೆ ಚರ್ಚಿಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೂರ್ಮರಾವ್, ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರ ವಿಶ್ವಮಟ್ಟದ ಸಂಶೋಧನಾ ಸಂಸ್ಥೆ. ಅಲ್ಲಿ ಗ್ರಂಥಾಲಯವಿದ್ದು, ಅದೂ ಕೂಡ ವಿಶ್ವಮಟ್ಟದ ಗ್ರಂಥ ಭಂಡಾರವಾಗಿದೆ. ಈಗಾಗಲೇ 16 ಬಗೆಯ ಕಾಫಿ ತಳಿಗಳನ್ನು ಅಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿ ಚಂದ್ರಗಿರಿ ಅತ್ಯಂತ ಜನಪ್ರಿಯ ತಳಿ. ಮುಂದಿನ ನೂರು ವರ್ಷಗಳಿಗೆ ಈ ತಳಿ ಒಯ್ಯಬೇಕೆನ್ನುವುದು ಎಲ್ಲರ ಜವಾಬ್ದಾರಿ. ಗುಣಮಟ್ಟದೊಡನೆ ಉತ್ಪಾದನೆ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ನಡುವೆಯೇ ಲಾಂಛನ ಅನಾವರಣ ಹಾಗೂ ಧ್ಯೇಯವಾಕ್ಯವನ್ನು ಬಿಡುಗಡೆ ಮಾಡಲಾಯಿತು. ಸಿಸಿಆರ್‌ಐ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಎಂ.ಸೆಂಥಿಲ್‌ಕುಮಾರಿ ಸ್ವಾಗತಿಸಿದರು. ಏರ್‌ಡೆಕ್ಕನ್‌ನ ಸಂಸ್ಥಾಪಕ ಹಾಗೂ ಪ್ರಗತಿಪರ ಕಾಫಿ ಬೆಳೆಗಾರ ಕ್ಯಾ.ಜಿ.ಆರ್.ಗೋಪಿನಾಥ್, ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಎ.ನಂದಾ ಬೆಳ್ಯಪ್ಪ, ಅಖಿಲ ಭಾರತ ಕಾಫಿ ಕ್ಯೂರರ್‍ಸ್ ಸಂಘದ ಅಧ್ಯಕ್ಷ ಎ.ಎನ್.ದೇವರಾಜ್, ಒರಿಸ್ಸಾ ಕಾಫಿ ಬೆಳೆಗಾರರ ಸಂಘದ ಪ್ರದೀಪ್‌ಕುಮಾರ್ ಮೊಹಂತಿ, ಭಾರತೀಯ ಕಾಫಿ ಮಾರುಕಟ್ಟೆ ಸಹಕಾರ ಸಂಸ್ಥೆ ಅಧ್ಯಕ್ಷ ಎ.ಎ.ಶಿವ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಶಿವಣ್ಣ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್.ಪರಮೇಶ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಎ.ಅರವಿಂದರಾವ್, ಭಾರತೀಯ ಸ್ಪೆಷಾಲಿಟಿ ಕಾಫಿ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಪೂರ್ಣೇಶ್, ಪ್ರಗತಿಪರ ಆದಿವಾಸಿ ಕಾಫಿ ಬೆಳೆಗಾರರು ಹಾಗೂ ಎಫ್‌ಪಿಒ ಉತ್ತೇಜಕರಾದ ವನತಲ ಸಂಧ್ಯಾ ಮತ್ತು ಕೊರ್ರ ಸಾವಿತ್ರಿ, ಇನ್‌ಸ್ಟಾಂಟ್ ಕಾಫಿ ಉತ್ಪಾದಕರು ಮತ್ತು ರಫ್ತುದಾರರ ಸಂಘದ ಅಧ್ಯಕ್ಷ ಕೆ.ವಿ.ಕೆ.ರಾಜು ಉಪಸ್ಥಿತರಿದ್ದರು.
18 ಕೆಸಿಕೆಎಂ 3ಚಿಕ್ಕಮಗಳೂರಿನ ಕಾಫಿ ಮಂಡಳಿ ಉಪ ನಿರ್ದೇಶಕರ ವಿಸ್ತರಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಶತಮಾನೋತ್ಸವ ಲಾಂಚನ ಬಿಡುಗಡೆ ಕಾರ್ಯಕ್ರಮ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಉದ್ಘಾಟಿಸಿದರು.