ರಾಜ್ಯ ಸರ್ಕಾರದಿಂದ ಹೊಸ ಶಿಕ್ಷಣ ನೀತಿ: ಎ.ಎಸ್. ಪೊನ್ನಣ್ಣ

KannadaprabhaNewsNetwork |  
Published : Dec 17, 2024, 01:04 AM IST
ಚಿತ್ರ : 16ಎಂಡಿಕೆ1 : ಶಾಸಕರಿಗೆ ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನ. | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ಹೊಸ ಶೈಕ್ಷಣಿಕ ನೀತಿಯನ್ನು ರೂಪಿಸಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಒಗ್ಗೂಡಿಸಿ ಶಾಲಾ ವಾತಾವರಣ ಮೂಡಿಸಬೇಕು ಎಂದು ಚಿಂತಿಸಿ ಕ್ರಮ ಕೈಗೊಂಡಿದೆ ಎಂದು ಶಾಸಕ ಎ.ಎಸ್‌. ಪೊನ್ನಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ರಾಜ್ಯದ ಕಾಂಗ್ರೆಸ್ ಸರ್ಕಾರ ಹೊಸ ಶೈಕ್ಷಣಿಕ ನೀತಿಯನ್ನು ರೂಪಿಸಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಒಗ್ಗೂಡಿಸಿ ಶಾಲಾ ವಾತಾವರಣ ನಿರ್ಮಿಸಬೇಕೆಂದು ಚಿಂತಿಸಿ ಕ್ರಮ ಕೈಗೊಂಡಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.

ಬಿರುನಾಣಿಯ ಮರೆನಾಡು ಪ್ರೌಢಶಾಲೆಯ 67ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಿಂದ ಹೊಸ ಶೈಕ್ಷಣಿಕ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಕಟ್ಟಡಗಳಿವೆ, ಶಿಕ್ಷಕರಿದ್ದಾರೆ, ಆದರೆ ಮಕ್ಕಳ ಕೊರತೆ ಇದೆ. ಆದರಿಂದ ಅಕ್ಕಪಕ್ಕದ ಶಾಲೆಗಳನ್ನು ಗುರುತಿಸಿ ಕ್ಲಸ್ಟರ್ ರೀತಿಯಲ್ಲಿ ರೂಪಿಸಿ ಎಲ್ಲ ಶಾಲೆಗಳನ್ನು ಒಗ್ಗೂಡಿಸಿ ಒಂದು ಶಾಲೆ ಮಾಡಿ ವಿದ್ಯಾಭ್ಯಾಸ ಕೊಡಬೇಕೆಂಬ ಚಿಂತನೆ ಇದೆ. ಇದರಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಶಾಲೆಗೆ ಬಂದು ಪುಸ್ತಕ ನೋಡಿ ಹೋದರೆ ಸಾಲದು. ಶಾಲೆಯಲ್ಲಿ ಸ್ನೇಹ ಬೆಳೆಯಬೇಕು. ಪರಿಚಯವಾಗಬೇಕು. ಶಾಲಾ ವಾತಾವರಣ ನಿರ್ಮಾಣ ಮಾಡಿ ಈ ಸಮಾಜದ ಕಟ್ಟ ಕಡೆಯ ಮಕ್ಕಳಿಗೂ ವಿದ್ಯಾಭ್ಯಾಸ ದೊರೆಯಬೇಕೆಂಬ ಚಿಂತನೆ ನಮ್ಮ ಸರ್ಕಾರದ್ದಾಗಿದೆ ಎಂದು ತಿಳಿಸಿದರು.

ಇದಕ್ಕೆ ಆದ್ಯತೆ ನೀಡಿ ನಮ್ಮ ಜಿಲ್ಲೆಯಲ್ಲಿಯೂ ಮೂಲಭೂತ ಸಮಸ್ಯೆ ಇರುವಂತಹ ಶಾಲೆಗಳನ್ನು ಗುರುತಿಸಿ ಈ ನೀತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಹಾಗೆಯೇ ಕರ್ನಾಟಕ ಪಬ್ಲಿಕ್ ಶಾಲೆ, ವಸತಿ ಶಾಲೆಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದರು.

ಕ್ಷೇತ್ರದಲ್ಲಿ ಮೂರು ವಸತಿ ಶಾಲೆ ಮಂಜೂರಾಗಿದೆ. ಇದರಲ್ಲಿ ಹುದಿಕೇರಿ ಹೋಬಳಿ ಸಹ ಒಂದಾಗಿದೆ. ಒಂದು ವಸತಿ ಶಾಲೆಗೆ 10 ಎಕರೆ ಜಾಗ ಬೇಕಾಗಿದೆ. ವಸತಿ ಶಾಲೆ ನಿರ್ಮಾಣಕ್ಕೆ ಸರ್ಕಾರ 25 ಕೋಟಿ ರು. ವೆಚ್ಚವನ್ನು ಭರಿಸಲಿದೆ, ಮೂರು ಶಾಲೆಗಳಿಗೆ ಸುಮಾರು 75 ಕೋಟಿ ರು. ವೆಚ್ಚವಾಗಲಿದೆ ಎಂದು ಹೇಳಿದರು.

ಬಿರುನಾಣಿ ಮರೆನಾಡು ಪ್ರೌಢಶಾಲೆಗೆ ಕಾಯಕಲ್ಪ:

ಹೆಚ್ಚು ಮಳೆಯಾಗುವ, ಕಾಡು ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ನಮ್ಮ ಪೂರ್ವಜರು ಹೆಚ್ಚು ಶ್ರಮವಹಿಸಿ ಮರೆನಾಡು ಪ್ರೌಢಶಾಲೆಯನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ಉಳಿಸಬೇಕು, ಹೆಚ್ಚಾಗಿ ಬಡ ಮಕ್ಕಳಿಗೆ ಪ್ರಯೋಜನವಾಗುವ, ವಿದ್ಯಾಭ್ಯಾಸವನ್ನು ಕೊಡುವ ಕಾರ್ಯವನ್ನು ಮುಂದುವರಿಸಬೇಕು ಎಂಬ ಆಡಳಿತ ಮಂಡಳಿ ಹಾಗೂ ಇಲ್ಲಿನ ಮುಖಂಡರ ಆಸಕ್ತಿಯಿಂದ ನಾನು ಪ್ರೇರಿತನಾಗಿದ್ದೇನೆ. ಮುಂದಿನ ಹಲವಾರು ದಶಕಗಳಿಗೆ ಇನ್ನಷ್ಟು ದೊಡ್ಡದಾಗಿ ಬೆಳೆದು ಈ ಭಾಗದ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಕೊಡವ ಮಂದಿರವಾಗಿ ಮರೆನಾಡು ಪ್ರೌಢಶಾಲೆ ಉಳಿಯಲಿ ಎಂದು ಪೊನ್ನಣ್ಣ ಹಾರೈಸಿದರು.

ಆಧುನಿಕ ತಂತ್ರಜ್ಞಾನದ ಮೂಲಕ ವಿಶ್ವದಲ್ಲಿ ಏನು ನಡೆದಿದೆ ಎಂಬುವುದನ್ನು ಕ್ಷಣಮಾತ್ರದಲ್ಲಿ ನಮಗೆ ತಿಳಿಯಬಹುದು. ಆದರೆ ವಿದ್ಯಾಭ್ಯಾಸವೇ ಬೇರೆ. ಹೆಚ್ಚಾಗಿ ನಾವು ಮೌಲ್ಯಗಳನ್ನು ಶಿಸ್ತುಬದ್ಧ ಜೀವನವನ್ನು ಹಾಗೂ ಶ್ರಮವಹಿಸಿ ಬದುಕು ಕಟ್ಟುವುದನ್ನು ಕಲಿಯುತ್ತೇವೆ. ವಿದ್ಯಾಭ್ಯಾಸ ಕೊಡುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಅನುದಾನಿತ ಶಾಲೆಗಳನ್ನು ಉಳಿಸುವುದು ಸಹ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿಯಿಂದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಾಳಿಮಾಡ ರಶಿಕಾ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಬಗರ್ ಹುಕುಂ ಸಕ್ರಮೀಕರಣ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಕಾಳಿಮಾಡ ಮುತ್ತಣ್ಣ, ಶಾಲೆಗೆ ಜಾಗ ದಾನ ನೀಡಿದ ಕಾಯಪಂಡ ಕುಟುಂಬದ ಪರ ಕುಟುಂಬದ ಅಧ್ಯಕ್ಷ ಕಾಯಪಂಡ ಅಯ್ಯಪ್ಪ, ತಾ.ಪಂ. ಮಾಜಿ ಸದಸ್ಯ ಬೊಳ್ಳೇರ ಪೊನ್ನಪ್ಪ, ಕರ್ತಮಾಡ ನಂದ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕುಪ್ಪಣಮಾಡ ನಂಜಮ್ಮ, ಉಪಾಧ್ಯಕ್ಷ ಕಾಯಪಂಡ ಸುನಿಲ್ ಮಾಚಯ್ಯ, ಖಜಾಂಚಿ ಅಮ್ಮತ್ತೀರ ಚಂದ್ರಶೇಖರ್, ಕಾಳಿಮಾಡ ನಂದ,ಮುಖ್ಯ ಶಿಕ್ಷಕ ಕಾಯಪಂಡ ಕಿಶೋರ್ ಮತ್ತಿತರರಿದ್ದರು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ